ಕಾಡಾನೆ ದಾಳಿಗೆ ವ್ಯಕ್ತಿ ಬಲಿ : ಅರಣ್ಯ ಇಲಾಖೆ ವಿರುದ್ಧ ಶಾಸಕ ಕೆ.ಜಿ.ಬೋಪಯ್ಯ ತೀವ್ರ ಅಸಮಾಧಾನ

28/12/2020

ಮಡಿಕೇರಿ ಡಿ.28 : ನೆರೆಯ ಮನೆಯ ಮದುವೆ ಚಪ್ಪರ ಸಮಾರಂಭಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಾಪೋಕ್ಲುವಿನ ಪೇರೂರಿನಲ್ಲಿ ನಡೆದಿದೆ. ಸ್ಥಳೀಯ ಮಂಜಾಟ್ ನಿವಾಸಿ ಅರಮನೆ ಪಾಲೆ ಜನಾಂಗದ ಅಪ್ಪಣ್ಣ(45) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ.
ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಮಂಜಾಟ್‍ನಲ್ಲಿರುವ ತಮ್ಮ ಮನೆಗೆ ಆಗಮಿಸುತ್ತಿದ್ದ ಸಂದರ್ಭ ಕಾಡಾನೆ ದಾಳಿಗೆ ಸಿಲುಕಿದ ಅಪ್ಪಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
::: ಶಾಸಕ ಬೋಪಯ್ಯ ಅಸಮಾಧಾನ :::
ವಿಷಯ ತಿಳಿದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವ್ವನ ಹೇಳಿದರು. ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಮಂಜಾಟ್ ಕಾಲೋನಿ ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದೇ ಈ ಸಾವಿಗೆ ಕಾರಣವಾಗಿದೆ. ವಿದ್ಯುತ್ ಲೈನ್ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಮಾಡಿದ ಪರಿಣಾಮ ಇಂದು ಅಪ್ಪಣ್ಣ ಪ್ರಾಣ ಕಳೆದುಕೊಳ್ಳುವಂತಾಗಿದೆ. ಅಪ್ಪಣ್ಣನ ಜೀವವನ್ನು ಅರಣ್ಯ ಇಲಾಖೆಗೆ ಮರಳಿಸಲು ಸಾಧ್ಯವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೈಸಾರಿ ಜಾಗದಲ್ಲಿ ಅದರಲ್ಲೂ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ಕರೆಂಟ್ ಕಂಬವನ್ನು ಅರಣ್ಯ ಇಲಾಖೆ ಕಿತ್ತು ಹಾಕಿದೆ. ಅದೇನು ರಕ್ಷಿತಾರಣ್ಯವೇ ಎಂದು ಪ್ರಶ್ನಿಸಿದ ಬೋಪಯ್ಯ, ಕಂಬ ಕೀಳಲು ಅನುಮತಿ ನೀಡಿದವರ್ಯಾರು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗಿರಿಜನ ಹಾಡಿ, ಪರಿಶಿಷ್ಟ ಜಾತಿ, ಜನಾಂಗ ನೆಲೆಸಿರುವ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ನೀಡಬೇಕೆಂಬ ಕಾನೂನಿದೆ. ಆದರೆ ಅರಣ್ಯ ಇಲಾಖೆ ಎಲ್ಲದಕ್ಕೂ ಅಡ್ಡಿ ಮಾಡುತ್ತಿದೆ ಎಂದು ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.
::: ಶಾಶ್ವತ ಪರಿಹಾರ ಅಗತ್ಯ :::
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕೊಡಗು ಜಿಲ್ಲೆಯಲ್ಲಿ ಮಾನವ ವನ್ಯ ಪ್ರಾಣಿ ಸಂಘರ್ಷ ಮಿತಿ ಮೀರಿದ್ದು, ಇದೀಗ ಹುಲಿ ಹಾವಳಿಯೂ ಕಂಡು ಬಂದಿದೆ. ಮಾನವ ಪ್ರಾಣ ಹಾನಿಗೆ ಸರಕಾರ 7.5 ಲಕ್ಷ ರೂ. ಪರಿಹಾರ ನೀಡುತ್ತಿದೆಯಾದರೂ ಅದು ಶಾಶ್ವತ ಪರಿಹಾರವಲ್ಲ ಎಂದು ಹೇಳಿದರು.
ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟ ವ್ಯಾಪ್ತಿಯ 500 ಕಿ.ಮೀ ವ್ಯಾಪ್ತಿಯಲ್ಲಿ ರೈಲ್ವೇ ಕಂಬಿ ಅಳವಡಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದಕ್ಕೆ ಒಪ್ಪಿಗೆ ಸಿಗುವ ವಿಶ್ವಾಸವಿದೆ. ಕೋವಿಡ್ ಹಿನ್ನಲೆಯಲ್ಲಿ ಹಣಕಾಸಿನ ಸಂಕಷ್ಟ ಪರಿಸ್ಥಿತಿಯೂ ಇದ್ದು ಅನುದಾನ ದೊರೆತಲ್ಲಿ ಕಾಡಾನೆ ಹಾವಳಿ ತಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪ್ರವಾಸೋದ್ಯಮದಿಂದ ಅರಣ್ಯ ಇಲಾಖೆಗೆ ಲಾಭವೂ ದೊರಕುತ್ತಿದ್ದು, ಇದಕ್ಕಾಗಿಯೇ ಕೂರ್ಗ್ ಫೌಂಡೇಷನ್ ಎಂಬ ಸಮಿತಿಯೂ ಇದೆ. ಮಂಗಳವಾರ ಬೆಂಗಳೂರಿನಲ್ಲಿ ಈ ಸಮಿತಿಯ ಸಭೆ ಇದ್ದು, ಅದರಲ್ಲಿ ಪಾಲ್ಗೊಂಡು ಆನೆ ಕಂದಕ, ಸೋಲಾರ್ ಬೇಲಿ ಅಳವಡಿಕೆಗೆ ಕ್ರಮ ವಹಿಸಲಾಗುತ್ತದೆ. ಈಗಾಗಲೇ ಆನೆ ಕಂದಕ, ಸೋಲಾರ್ ಬೇಲಿ ಇರುವ ಕಡೆಗಳಲ್ಲಿ ಅದರ ನಿರ್ವಹಣೆ ಇಲ್ಲದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.