“ಶುಚಿ ಯೋಜನೆ” ಪುನರ್ ಜಾರಿಗೆ ಕೊಡಗು ಮಹಿಳಾ ಕಾಂಗ್ರೆಸ್ ಒತ್ತಾಯ

28/12/2020

ಮಡಿಕೇರಿ ಡಿ.28 : ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ 2013-14ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ “ಶುಚಿ ಯೋಜನೆ”ಯನ್ನು ಪುನರ್ ಜಾರಿಗೊಳಿಸಬೇಕೆಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಹೆಣ್ಣು ಮಕ್ಕಳ ವೈಯುಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ 14 ರಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸೀಮಿತವಾಗಿ “ಶುಚಿ ಯೋಜನೆ”ಯನ್ನು ಜಾರಿಗೆ ತರಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೋವಿಡ್ ನೆಪವೊಡ್ಡಿ ಈ ಯೋಜನೆಯ ಸೌಲಭ್ಯಗಳನ್ನು ನೀಡದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ವೈಯುಕ್ತಿಕ ಶುಚಿತ್ವದ ಕೊರತೆಯಿಂದ ಹೆಣ್ಣು ಮಕ್ಕಳ ಜನನಾಂಗಕ್ಕೆ ಸೋಂಕು ತಗುಲಿ ಗರ್ಭಕೋಶದ ತೊಂದರೆಗೆ ಒಳಗಾಗುತ್ತಿದ್ದ ಬಗ್ಗೆ ಆರೋಗ್ಯ ಇಲಾಖೆ ವರದಿ ಪರಿಗಣಿಸಿ ಅಂದಿನ ಸರ್ಕಾರ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆರಂಭಿಸಿತ್ತು. ಶಿಕ್ಷಣ ಇಲಾಖೆ ಮೂಲಕ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿನಿಯರಿಗೆ ಹಾಗೂ ಶಾಲಾ, ಕಾಲೇಜು ಬಿಟ್ಟ 19 ವರ್ಷದೊಳಗಿನ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಮೂಲಕ ಉಚಿತ ನ್ಯಾಪ್ಕಿನ್ ನೀಡಲಾಗುತ್ತಿತ್ತು. ಆದರೆ ಈ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಋತುಚಕ್ರ ಎನ್ನುವುದು ಪ್ರಕೃತಿಯ ನಿಯಮವಾಗಿದೆ, ಗ್ರಾಮೀಣ ಹೆಣ್ಣುಮಕ್ಕಳು ಇಂದಿಗೂ ಕೂಡ ಹಳೆಯ ಬಟ್ಟೆಗಳನ್ನೇ ಬಳಸುತ್ತಿದ್ದು, ಇದರಿಂದ ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಹಾಗೂ ಕಡು ಬಡ ಕುಟುಂಬಗಳ ಹೆಣ್ಣುಮಕ್ಕಳ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಕ್ಷಣ “ಶುಚಿ ಯೋಜನೆ”ಯನ್ನು ಪುನರ್ ಜಾರಿಗೊಳಿಸಬೇಕೆಂದು ಸುರಯ್ಯ ಅಬ್ರಾರ್ ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿನಾಸ್ ಪ್ರವೀಣ್, ಮಡಿಕೇರಿ ನಗರಾಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ನಗರಸಭೆಯ ಮಾಜಿ ಅಧ್ಯಕ್ಷೆ ಜುಲೇಕಾಬಿ, ಬೇಗಂ, ಸೇವಾದಳದ ಜಿಲ್ಲಾಧ್ಯಕ್ಷೆ ಪ್ರೇಮಾ ಕೃಷ್ಣಪ್ಪ, ಸದಸ್ಯರುಗಳಾದ ಮಣಿ, ದೀಪಿಕಾ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.