ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಸಂಭ್ರಮದಿಂದ ಜರುಗಿದ ಪುತ್ತರಿ ಊರೊರ್ಮೆ

28/12/2020

ಚೆಟ್ಟಳ್ಳಿ ಡಿ.28 : ಚೆಟ್ಟಳ್ಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಮೊದಲ ವರ್ಷದ ಪುತ್ತರಿ ಊರೊರ್ಮೆ ಸಂತೋಷ ಕೂಟ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮದಿಂದ ಜರುಗಿತು.
ಏರ್‍ಫೋರ್ಸ್‍ನ ನಿವೃತ್ತ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಅವರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪುರುಷರಿಗೆ ತೆಂಗಿನಕಾಯಿಗೆ ಗುಂಡುಹೊಡೆಯುವುದು, ಮಹಿಳೆಯರಿಗೆ ಬೆಲೂನಿಗೆ ಗುಂಡುಹೊಡೆಯುವುದು, ಚಮಚದಲ್ಲಿ ನಿಂಬೆಯನಿಟ್ಟು ನಡೆಯುವುದು, ವಿಷದಚೆಂಡು ಹೀಗೆ ಹಲವು ಕ್ರೀಡೆಗಳು ನಡೆದವು. ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಮಾತನಾಡಿ ಕೊಡವರ ಸಂಪ್ರದಾಯ ಆಚಾರ, ವಿಚಾರವನ್ನು ಉಳಿಸಿ ಬೆಳೆಸಲು ಚೆಟ್ಟಳ್ಳಿ ಕೊಡವ ಸಮಾಜವನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡವರು ಬೀಫ್ ತಿನ್ನುತ್ತಾರೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ತಿಳಿಸಿದರು.
ಕಾವೇರಿ ತೀರ್ಥೋದ್ಭವದ ಸಂದರ್ಭ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಮೂಲನಿವಾಸಿಗಳಿಗೆ ಅಡ್ಡಿ ಪಡಿಸಲಾಯಿತು. ಆದರೆ ಇದೀಗ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಮಾಜದ ಕಾರ್ಯದರ್ಶಿ ಪುತ್ತರಿರ ಕರುಣ್‍ಕಾಳಯ್ಯ ಅವರಿಗೆ ಪತ್ರಿಕಾಕ್ಷೇತ್ರದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಸಮಾಜದ ಪರವಾಗಿ ರತ್ತು ಅಭಿನಂದಿಸಿದರು.
ಬಿಟ್ಟೀರ ರಕ್ಷು ಕಾಳಪ್ಪ ಊರ್ರೊಮೆ ಅಂದ್-ಇಂದ್ ಎನ್ನುವ ವಿಚಾರದ ಬಗ್ಗೆ ಮಾತನಾಡಿದರು. ಕ್ರೀಡಾ ವಿಜೇತರಿಗೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಸಮಾಜದ ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ, ಬಿದ್ದಂಡ ಮಾದಯ್ಯ, ಚೆಟ್ಟಳ್ಳಿ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಪುತ್ತರಿರ ರಾಬಿನ್ ಚಂಗಪ್ಪ ಬಹುಮಾನ ವಿತರಿಸಿದರು.
ಸಮಾಜದ ಉಪಾಧ್ಯಕ್ಷೆ ಐಚೆಟ್ಟಿರ ಸುನಿತಾ ಮಾಚಯ್ಯ ನಿರೂಪಿಸಿ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ವಂದಿಸಿದರು. ತಂಬಿಟ್ಟು, ಪುತ್ತರಿ ಗೆಣಸಿನ ವಿಶೇಷ ಖಾದ್ಯ ಸೇರಿದಂತೆ ವಿವಿಧ ಭಕ್ಷ್ಯ ಬೋಜನಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸಿತು.
ಕೊಡವ ಸಂಪ್ರದಾಯದಂತೆ ದೇವರಿಗೆ ಮೀದಿ ಇಡಲಾಯಿತು. ಹಿರಿಯರಾದ ಗಣೇಶ್ ಭೀಮಯ್ಯ ಅವರು ಎಲ್ಲರಿಗೂ ಶುಭ ಕೋರಿದರು. ಕೊಡವ ಸಾಂಪ್ರದಾಯಿಕ ದುಡಿಕೊಟ್ಟ್ ಹಾಡನ್ನು ಹಾಡಲಾಯಿತು. ಪುತ್ತರಿರ ಸೀತಮ್ಮ ಮೊಣ್ಣಪ್ಪ, ಮುಳ್ಳಂಡ ಸುಶೀಲ ತಮ್ಮಯ್ಯ, ಚೋಳಪಂಡ ನಾಣಯ್ಯ ಕೊಡವ ಹಾಡು ಹಾಡಿದರು.