ಬ್ಯಾಂಕ್ ಗಳಲ್ಲಿ ಕನ್ನಡ ಆಡಳಿತ ಭಾಷೆಯಾಗಲಿ : ಕೊಡಗು ಕನ್ನಡ ಜಾಗೃತಿ ಸಮಿತಿ ಒತ್ತಾಯ

December 29, 2020

ಮಡಿಕೇರಿ ಡಿ.29 : (NEWS DESK) ಕರ್ನಾಟಕದ ರಾಜ್ಯದ ಎಲ್ಲಾ ಬ್ಯಾಂಕ್ ಗಳಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕೆಂದು ಒತ್ತಾಯಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಎಸ್.ಮಹೇಶ್ ಅವರು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕೆನ್ನುವುದು ಸಮಸ್ತ ಕನ್ನಡಿಗರ ಅಭಿಲಾಷೆಯಾಗಿದೆ. ರಾಜ್ಯ ಸರ್ಕಾರ ಕೂಡ 2020 ನೇ ನ.1 ರಿಂದ 2021 ರ ಅ.31 ರ ವರೆಗಿನ ಅವಧಿಯನ್ನು ಕನ್ನಡ ಕಾಯಕ ವರ್ಷ ಎಂದು ಘೋಷಣೆ ಮಾಡಿದೆ. ಇದರ ಅನುಷ್ಠಾನದ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಹಿಸಿಕೊಂಡಿದೆ ಎಂದರು.
ಬ್ಯಾಂಕ್ ಗಳು ಜನರ ಪ್ರಮುಖ ಜೀವನಾಡಿಯಾಗಿದ್ದು, ಇಲ್ಲಿನ ಎಲ್ಲಾ ವ್ಯವಹಾರ, ಸುತ್ತೋಲೆಗಳ ಮಾಹಿತಿಗಳು ಕನ್ನಡದಲ್ಲಿದ್ದರೆ ಗ್ರಾಹಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಬ್ಯಾಂಕ್ ಗೆ ಸಂಬಂಧಿಸಿದ ಜಾಲತಾಣ, ಎಟಿಎಂ ವ್ಯವಹಾರ, ಸೂಚನಾ ಫಲಕ, ಚೆಕ್, ಚಲನ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಹಿಂದಿ ಹಾಗೂ ಇಂಗ್ಲೀಷ್ ನೊಂದಿಗೆ ಕನ್ನಡಕ್ಕೂ ಆದ್ಯತೆ ನೀಡಬೇಕೆಂದು ಮಹೇಶ್ ಒತ್ತಾಯಿಸಿದರು.
ಗ್ರಾಹಕರ ಅನುಕೂಲಕ್ಕಾಗಿ ಕನ್ನಡ ಬಲ್ಲವರನ್ನು ಸಂಪರ್ಕಧಿಕಾರಿಯನ್ನಾಗಿ ನೇಮಿಸಿ ಪರಿಣಾಮಕಾರಿಯಾಗಿ ಕನ್ನಡವನ್ನು ಅನುಷ್ಠಾನಗೊಳಿಸಬಹುದು. ಬ್ಯಾಂಕ್ ಸಿಬ್ಬಂದಿಗಳಿಗಾಗಿ ವಾರಕೊಮ್ಮೆ ಕನ್ನಡಕ್ಕೆ ಸಂಬಂಧಿಸಿದ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ಕನ್ನಡ ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳಾದ ಭಾರತಿ ರಮೇಶ್, ಇ.ರಾಜು, ರಂಜಿತಾ ಕಾರ್ಯಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಕೊಡಗು ಲೇಖಕರ ಬಳಗದ ಅಧ್ಯಕ್ಷ ಕೇಶವ್ ಕಾಮತ್, ಮೂಡ ಮಾಜಿ ಅಧ್ಯಕ್ಷ ಮುನೀರ್ ಅಹಮ್ಮದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಪ್ರೇಮನಾಥ್, ಲಕ್ಷ್ಮಿಕಾಂತ್ ಕೊಮಾರಪ್ಪ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.

error: Content is protected !!