ಗ್ರಾ.ಪಂ.ಚುನಾವಣೆ : ಮತ ಎಣಿಕೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

29/12/2020

ಮಡಿಕೇರಿ ಡಿ.29 : ಕೊಡಗು ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ನಡೆದಿರುವ 101 ಗ್ರಾ.ಪಂ.ಗಳ ಮತ ಎಣಿಕೆಯು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರದಲ್ಲಿ ಡಿಸೆಂಬರ್, 30 ರಂದು ನಡೆಯಲಿದೆ.
ಮತ ಎಣಿಕೆಯು ಡಿಸೆಂಬರ್, 30 ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆಯಲಿದ್ದು, 26 ಕೊಠಡಿಗಳಲ್ಲಿ, 45 ಟೇಬಲ್‍ಗಳನ್ನು ಅಳವಡಿಸಲಾಗಿದ್ದು, 98 ಎಣಿಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, 13 ಕೊಠಡಿಗಳಲ್ಲಿ 59 ಮೇಜುಗಳನ್ನು ಅಳವಡಿಸಲಾಗಿದ್ದು, 130 ಮತ ಎಣಿಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ವಿರಾಜಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ವಿರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, 11 ಕೊಠಡಿಗಳಲ್ಲಿ, 45 ಟೇಬಲ್‍ಗಳನ್ನು ಅಳವಡಿಸಲಾಗಿದ್ದು, 100 ಎಣಿಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ ಜಿಲ್ಲೆಯ ಮೂರು ಕಡೆಯಲ್ಲಿ ನಡೆಯುವ ಮತ ಎಣಿಕೆಯು ಒಟ್ಟು 50 ಕೊಠಡಿಗಳಲ್ಲಿ, 149 ಮೇಜುಗಳನ್ನು ಅಳವಡಿಸಲಾಗಿದ್ದು, ಮತ ಎಣಿಕೆಗೆ 328 ಅಧಿಕಾರಿಗಳನ್ನು ನಿಯೋಜಿಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿವರಿಸಿದ್ದಾರೆ.
ಮತ ಎಣಿಕೆಗೆ ಅಗತ್ಯ ಸಿದ್ಧತೆ ಮಾಡಲಾಗಿದೆ. ಅಭ್ಯರ್ಥಿಗಳು, ಎಣಿಕೆ ಏಜೆಂಟರುಗಳು ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಂದ ಅಥವಾ ತಹಶೀಲ್ದಾರ್ ಅವರಿಂದ ಪಡೆದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಮೊಬೈಲ್ ಹಾಗೂ ಬೆಂಕಿಪೊಟ್ಟಣ ಮತ್ತಿತರ ಸ್ಫೋಟಕ ವಸ್ತುಗಳನ್ನು ಮತ ಎಣಿಕೆ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ ಮತ್ತು ಎಣಿಕೆ ಕೊಠಡಿಯೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿದೆ.
ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 328 ಅಧಿಕಾರಿ/ ಸಿಬ್ಬಂದಿಗಳನ್ನು ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕರಾಗಿ ನೇಮಕ ಮಾಡಲಾಗಿದೆ. ಅಲ್ಲದೇ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಇತರೆ ಎಣಿಕೆ ಕೆಲಸಗಳಿಗೆ ನಿಯೋಜಿಸಲಾಗಿದೆ.
ಮತ ಎಣಿಕೆಗಳ ಮೇಲ್ವಿಚಾರಣಾ ಕಾರ್ಯದಲ್ಲಿ ಚುನಾವಣಾ ವೀಕ್ಷಕರಿಗೆ ಸಹಕರಿಸಲು ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ವೀಕ್ಷಕರು ಮಡಿಕೇರಿ ತಾಲ್ಲೂಕಿನ ಮತ ಎಣಿಕೆ ಕಾರ್ಯದ ಮೇಲ್ವಿಚಾರಣೆ ಮಾಡಲಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿಗೆ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಕಂದೂ ಮತ್ತು ವಿರಾಜಪೇಟೆ ತಾಲ್ಲೂಕಿಗೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ.
ಕೋವಿಡ್-19 ಹಿನ್ನೆಲೆ ಮತ ಎಣಿಕೆ ಕಾರ್ಯಕ್ಕೆ ಕೈಗೊಂಡಿರುವ ಕ್ರಮಗಳು: ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಿ ಎಣಿಕೆ ಕೇಂದ್ರದೊಳಗೆ ಪ್ರವೇಶಿಸುವ ಅಧಿಕಾರಿಗಳು/ ಸಿಬ್ಬಂದಿಗಳನ್ನು ಥರ್ಮಲ್ ಸ್ಕ್ಯಾನ್‍ಗೆ ಒಳಪಡಿಸಲಾಗುವುದು.
ಅಧಿಕಾರಿಗಳು, ಸಿಬ್ಬಂದಿಗಳು, ಅಭ್ಯರ್ಥಿಗಳು ಮತ್ತು ಏಜೆಂಟರುಗಳು ಕಡ್ಡಾಯವಾಗಿ ಫೇಸ್‍ಮಾಸ್ಕ್ ಧರಿಸುವುದು. ಕೈಗಳನ್ನು ಸ್ವಾನಿಟೈಸರ್‍ನಿಂದ ಶುಚಿಗೊಳಿಸಿಕೊಳ್ಳುವುದು. ವಿಜೇತ ಅಭ್ಯರ್ಥಿಗಳಿಗೆ ದೃಢೀಕರಣ ಪತ್ರವನ್ನು ನೀಡುವಾಗ ಹಸ್ತಲಾಘವ ಮಾಡುವಂತಿಲ್ಲ. ಗುಂಪುಗಳಲ್ಲಿ/ ಮೆರವಣಿಗೆಗಳ ಮೂಲಕ ವಿಜೇತ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಡಿಸೆಂಬರ್, 30 ರಂದು ಬೆಳಗ್ಗೆ 06 ಗಂಟೆಯಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಲಾಗಿದೆ.
ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಡಿಸೆಂಬರ್, 30 ರಂದು ಬೆಳಗ್ಗೆ 6 ಗಂಟೆಯಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆಯವರೆಗೆ ಮತ ಎಣಿಕೆ ಕೇಂದ್ರಗಳಾದ ಮಡಿಕೇರಿಯ ಸೈಂಟ್ ಜೋಸೆಫ್ ಕಾನ್ವೆಂಟ್, ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆವರಣದೊಳಗೆ ಸಂಬಂಧಪಡದ/ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಿದೆ.
ಮತ ಎಣಿಕೆ ನಡೆಯುವ ಕೇಂದ್ರಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಗುಂಪು ಸೇರುವುದು, ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ.
ಗ್ರಾ.ಪಂ. ಚುನಾವಣೆ ಮತ ಎಣಿಕೆ ಅಧಿಕಾರಿಗಳಿಗೆ ಮಂಗಳವಾರ ನಗರದ ಸಂತ ಜೋಸೆಫರ ಶಾಲೆ ಸಭಾಂಗಣದಲ್ಲಿ ತರಬೇತಿ ನಡೆಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮತ ಎಣಿಕೆ ಸಿದ್ಧತೆ ಬಗ್ಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಚುನಾವಣಾ ಮೇಲುಸ್ತುವಾರಿ ನಿಲೇಶ್ ಸಿಂಧೆ, ಚುನಾವಣಾ ವೀಕ್ಷಕರಾದ ಎ.ದೇವರಾಜು, ತಹಶೀಲ್ದಾರ್ ಮಹೇಶ್, ಡಿವೈಎಸ್‍ಪಿ ದಿನೇಶ್ ಕುಮಾರ್ ಇತರರು ಇದ್ದರು.
ಗ್ರಾ.ಪಂ.ಚುನಾವಣೆ ಮತ ಎಣಿಕೆ ಬಗ್ಗೆ ಕೆ.ಜೆ.ದಿವಾಕರ ಅವರು ಮತ ಎಣಿಕೆ ಮೇಲ್ವಿಚಾರಕರು ಮತ್ತು ಸಹಾಯಕರಿಗೆ ತರಬೇತಿ ನೀಡಿದರು. ಹಾಗೆಯೇ ಆರ್‍ಒ ಮತ್ತು ಎಆರ್‍ಒಗಳಿಗೆ ಅಂಚೆ ಮತಪತ್ರ ಎಣಿಕೆ ಮತ್ತು ಅಂತಿಮ ಫಲಿತಾಂಶ ಪ್ರಕಟ ಬಗ್ಗೆ ಮಾಹಿತಿ ನೀಡಿದರು.