ಮಡಿಕೇರಿ ಕಾವೇರಿ ಲೇಔಟ್ ನಲ್ಲಿ ಸಮಸ್ಯೆಗಳ ಸರಮಾಲೆ : ನಿವಾಸಿಗಳ ಅಸಮಾಧಾನ : ಸ್ಥಳಕ್ಕೆ ಪೌರಾಯುಕ್ತರ ಭೇಟಿ

29/12/2020

ಮಡಿಕೇರಿ ಡಿ.29 : ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಕಾವೇರಿ ಲೇಔಟ್ ಕಳೆದ ಅನೇಕ ತಿಂಗಳುಗಳಿಂದ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ. ರಸ್ತೆ ಮತ್ತು ಚರಂಡಿ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು ಪೌರಾಯುಕ್ತರನ್ನು ಭೇಟಿಯಾಗಿ ಸ್ಥಳ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು.
ತಕ್ಷಣ ಸ್ಪಂದಿಸಿದ ಪೌರಾಯುಕ್ತ ರಾಮದಾಸ್ ಅವರು ಅವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ ದುರಸ್ತಿ ಕಾರ್ಯದ ಭರವಸೆ ನೀಡಿದರು. ಕಾವೇರಿ ಲೇಔಟ್‍ನಲ್ಲಿ ಸುಮಾರು 200 ಹಾಗೂ ಪಕ್ಕದ ಟಿ.ಚಾನ್ ಲೇಔಟ್‍ನಲ್ಲಿ 50 ಕ್ಕೂ ಹೆಚ್ಚಿನ ಕುಟುಂಬಗಳಿವೆ. ಇಲ್ಲಿನ ನಿವಾಸಿಗಳು ತಮ್ಮ ದೈನಂದಿನ ವ್ಯವಹಾರಗಳಿಗೆ ಕಾವೇರಿ ಲೇಔಟ್ ರಸ್ತೆಯನ್ನೇ ಅವಲಂಬಿಸಿದ್ದಾರೆ.
ಆದರೆ ಕಳೆದ ಐದು ವರ್ಷಗಳಿಂದ ಸಮರ್ಪಕವಾದ ಚರಂಡಿ ಮತ್ತು ರಸ್ತೆ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಪಕ್ಕದ ಕಾನ್ವೆಂಟ್ ರಸ್ತೆಯಿಂದ ರಭಸವಾಗಿ ಬರುವ ನೀರು ಕಾವೇರಿ ಬಡಾವಣೆಗೆ ನುಗ್ಗಿ ಮನೆಗಳನ್ನೂ ಆವರಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲೇ ಜೀವನ ಸಾಗಿಸುವಂತ್ತಾಗಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಸಂಪೂರ್ಣವಾಗಿ ಹದಗೆಟ್ಟು ವಾಹನಗಳು ಓಡಾಡಲು ಸಾಧ್ಯವೇ ಇಲ್ಲದಂತ್ತಾಗಿದೆ. ದ್ವಿಚಕ್ರ ವಾಹನಗಳು ಮತ್ತು ಪಾದಾಚಾರಿಗಳು ರಾತ್ರಿ ವೇಳೆಯಲ್ಲಿ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿದೆ. ಈ ಹಿಂದೆ ಹಲವು ಬಾರಿ ಸಮಸ್ಯೆಗಳನ್ನು ಬಗೆಹರಿಸುವಂತೆ ನಗರಸಭೆಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹದಗೆಟ್ಟ ರಸ್ತೆ, ಮೋರಿ, ಚರಂಡಿಗಳನ್ನು ಪರಿಶೀಲಿಸಿದ ಪೌರಾಯುಕ್ತರು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವ ಭರವಸೆ ನೀಡಿದರು.
ಇದಕ್ಕೂ ಮೊದಲು ಕಾವೇರಿ ಲೇಔಟ್ ನಿವಾಸಿಗಳು ನಗರಸಭಾ ಕಾರ್ಯಾಲಯಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದರು.