ಕರಡಿಗೋಡು ಚೂರಿ ಇರಿತ ಪ್ರಕರಣ : ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

December 29, 2020

ಮಡಿಕೇರಿ ಡಿ.29 : ಒಂದೇ ಕುಟುಂಬದ ಮೂವರಿಗೆ ಚೂರಿ ಇರಿದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಸಿದ್ದಾಪುರ ಪೊಲೀಸರು ಬಲೆ ಬೀಸಿದ್ದಾರೆ.
ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರಮುಖ ಆರೋಪಿ ಕರಡಿಗೋಡಿನ ರಾಮದಾಸ್ ಮತ್ತು ಜೊತೆಯಲ್ಲಿದ್ದ ಅಶೋಕ್ ಹಾಗೂ ಉಣ್ಣಿ ಎಂಬುವವರು ತಲೆ ಮರೆಸಿಕೊಂಡಿದ್ದಾರೆ.
ಚೂರಿ ಇರಿತಕ್ಕೊಳಗಾದ ಒಂದೇ ಕುಟುಂಬದ ಸದಸ್ಯರುಗಳಾದ ವಿಲ್ಸನ್ (45), ಸ್ಟೀಪನ್ (28) ಹಾಗೂ ತೀರ್ಥ (18) ಅವರುಗಳ ಸ್ಥಿತಿ ಗಂಭೀರವಾಗಿದ್ದು, ಮೈಸೂರು ಆಸ್ಪತೆಯಲ್ಲಿ ದಾಖಲಿಸಲಾಗಿದೆ.
ವಿಲ್ಸನ್ ಅವರ ಮನೆಯವರೊಂದಿಗೆ ಅನುಚಿತವಾಗಿ ವರ್ತಿಸಿದ್ದ ರಾಮ್ ದಾಸ್ ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮನೆಯಿಂದ ಹೊರ ಕಳುಹಿಸಲಾಗಿತ್ತು. ಇದೇ ಕಾರಣಕ್ಕೆ ಕುಪಿತನಾದ ರಾಮದಾಸ್ ಈ ಕೃತ್ಯ ಎಸಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಪ್ರಮುಖ ಆರೋಪಿ ರಾಮದಾಸ್ ಗಾಯಾಳುಗಳ ಸಂಬಂಧಿ ಎಂದು ಹೇಳಲಾಗಿದೆ.

error: Content is protected !!