ನಾಲ್ಕೇರಿ ಗ್ರಾಮದಲ್ಲಿ ಕೋಳಿ ಸಾರಿಗಾಗಿ ಕಾಳಗ : ಕೊಲೆಯಲ್ಲಿ ಅಂತ್ಯ

December 29, 2020

ಮಡಿಕೇರಿ ಡಿ.29 : ಕೋಳಿ ಸಾರಿಗಾಗಿ ನಡೆದ ಕಾಳಗ ಕೊಲೆಯಲ್ಲಿ ಅಂತ್ಯವಾದ ಘಟನೆ ಪೊನ್ನಂಪೇಟೆಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದಲ್ಲಿ ಕೆಲಸಕ್ಕಿದ್ದ ನಂಜನಗೂಡು ತಾಲ್ಲೂಕಿನ ಕೊತ್ತೇನಹಳ್ಳಿ ನಿವಾಸಿ ಕುಮಾರ್ (25) ಎಂಬುವವನೇ ಮೃತ ಕಾರ್ಮಿಕನಾಗಿದ್ದು, ಕೊಲೆ ಮಾಡಿದ ಮತ್ತೊಬ್ಬ ಕಾರ್ಮಿಕನನ್ನು ಕುಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ರಾತ್ರಿ ತೋಟದ ಸಮೀಪ ಕೋಳಿ ಸಾರು ಮಾಡಿ ಊಟ ಮಾಡುವ ಸಂದರ್ಭ ಸಾರು ಕಡಿಮೆ ಹಾಕಿದ್ದೀಯ ಎಂದು ಆರೋಪಿ ಕುಪಿತಗೊಂಡ ಕಾರಣ ಮಾತಿಗೆ ಮಾತು ಬೆಳೆದಿದೆ. ಇದು ಅತಿರೇಕಕ್ಕೆ ತಿರುಗಿ ಕುಮಾರ್ ಮೇಲೆ ಕ್ರಿಕೆಟ್ ಬ್ಯಾಟ್ ಮತ್ತು ಸೌದೆಯಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಸ್ಥಳದಲ್ಲೇ ಕುಮಾರ್ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ಕುಟ್ಟ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಇಬ್ಬರು ಕಾರ್ಮಿಕರು ಸುಮಾರು ಮೂರು ವಾರಗಳ ಹಿಂದೆ ಕೊತ್ತೇನಹಳ್ಳಿಯಿಂದ ನಾಲ್ಕೇರಿ ಗ್ರಾಮಕ್ಕೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರೆಂದು ಹೇಳಲಾಗಿದೆ.

error: Content is protected !!