ಗೋಹತ್ಯೆ ನಿಷೇಧ ಹೇಡಿತನವೆಂದ ಸಿದ್ದು

December 30, 2020

ಬೆಂಗಳೂರು ಡಿ.29 : ವಿಧಾನಮಂಡಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆಯನ್ನೇ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಸರ್ಕಾರದ ಹೇಡಿತನವನ್ನು ತೋರಿಸುತ್ತದೆ. ಚರ್ಚೆ ಮಾಡಿದರೆ ಈ ಮಸೂದೆಯ ಹಿಂದಿನ ದುರುದ್ದೇಶಗಳು ಅನಾವರಣಗೊಂಡು ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಚಿವ ಸಂಪುಟದಲ್ಲಿ ಜಾನುವಾರು ಸಂರಕ್ಷಣೆ ಮತ್ತು ಹತ್ಯೆ ಪ್ರತಿಬಂಧಕ ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿರುವ ಅವರು, ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಬೇಕು ಮತ್ತು ಗೋರಕ್ಷಣೆಯ ಹೆಸರಲ್ಲಿ ಪುಂಡಾಟಿಕೆ ನಡೆಸುವವರಿಗೆ ರಕ್ಷಣೆ ಕೊಡಬೇಕು ಎಂಬ ಎರಡು ದುರುದ್ದೇಶಗಳನ್ನು ಬಿಟ್ಟರೆ ಗೋಹತ್ಯೆ ನಿಷೇಧ ಮಸೂದೆಗೆ ಗೋವಿನ ಬಗ್ಗೆ ಭಕ್ತಿಯಾಗಲಿ, ಕಾಳಜಿಯಾಗಲಿ ಸರ್ಕಾರಕ್ಕೆ ಇಲ್ಲವೆಂದು ಗುಡುಗಿದ್ದಾರೆ.
ಗೋಹತ್ಯೆಗೆ ನಿಷೇಧವಂತೆ, ಗೋಮಾಂಸ ಮಾರಾಟ ಮತ್ತು ಸೇವನೆಗೆ ನಿರ್ಬಂಧ ಇಲ್ಲವಂತೆ. ಇಂತಹದ್ದೊಂದು ಎಡಬಿಡಂಗಿ ಕಾನೂನು ಮಾಡಲು ಇಷ್ಟೆಲ್ಲ ನಾಟಕ ಮಾಡಬೇಕೇ? ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಮಾರಾಟ ಮಾಡಲು ಗೋಮಾಂಸವನ್ನು ಆಮದು ಮಾಡಿಕೊಳ್ತಿರಾ? ಎಂದು ಪ್ರಶ್ನಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದಾಗಿ ರೈತರು ಮಾತ್ರ ಅಲ್ಲ, ಚರ್ಮದ ಉತ್ಪನ್ನಗಳ ತಯಾರಿಕೆಗೆ ಚರ್ಮದ ಕೊರತೆ ಎದುರಾಗಲಿದ್ದು, ಉತ್ಪಾದನೆ ಕುಂಠಿತಗೊಳ್ಳಲಿದೆ ಎಂದು ಹೇಳಿದ್ದಾರೆ.

error: Content is protected !!