ನಟ ರಜನಿಕಾಂತ್ ರಾಜಕೀಯ ಪ್ರವೇಶವಿಲ್ಲ

December 30, 2020

ಚೆನ್ನೈ ಡಿ.30 : ಮುಂದಿನ ವರ್ಷದ ಆರಂಭದಲ್ಲಿ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ಘೋಷಿಸಿಕೊಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯ ಕಾರಣದಿಂದ ತಮ್ಮ ಯೋಜನೆಯನ್ನು ರದ್ದುಗೊಳಿಸಿದ್ದಾರೆ.
ಇದೇ 31ರಂದು ತಮ್ಮ ರಾಜಕೀಯ ಪಕ್ಷ ಸ್ಥಾಪನೆಯನ್ನು ಘೋಷಿಸಲು ಮುಂದಾಗಿದ್ದರು. ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಸಜ್ಜಾಗುವುದಾಗಿಯೂ ಹೇಳಿಕೊಂಡಿದ್ದರು.
ಇಂದು ಇದ್ದಕ್ಕಿದ್ದಂತೆ ಹೇಳಿಕೆ ಹೊರಡಿಸಿ ಅವರ ಅಭಿಮಾನಿಗಳಲ್ಲಿ ಹಲವರಿಗೆ ನಿರಾಶೆಯನ್ನುಂಟು ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಹೇಳಿಕೆ ಪ್ರಕಟಿಸಿರುವ ರಜನಿಕಾಂತ್, ತಮ್ಮ ಅನಾರೋಗ್ಯ ಕಾರಣದಿಂದ ತಳಮಟ್ಟದಲ್ಲಿ ಕೆಲಸ ಮಾಡಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ, ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಸೋಷಿಯಲ್ ಮೀಡಿಯಾ ಮತ್ತು ವರ್ಚುವಲ್ ಮಾಧ್ಯಮ ಮೂಲಕವೇ ಸದ್ಯದ ಮಟ್ಟಿಗೆ ಜನರ ಜೊತೆ ಸಂಪರ್ಕ ಇರಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ರಾಜಕೀಯ ಪಕ್ಷ ಸೇರ್ಪಡೆ ಸದ್ಯಕ್ಕೆ ಅಸಾಧ್ಯ ಎಂದು ಹೇಳಿಕೊಂಡಿದ್ದಾರೆ.
ನಾನು ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ, ಚುನಾವಣಾ ರಾಜಕೀಯಕ್ಕೆ ಸೇರ್ಪಡೆಯಾಗದೆ ನನ್ನಿಂದಾದ ಮಟ್ಟಿಗೆ ಜನರ ಸೇವೆ ಮಾಡುತ್ತೇನೆ ಎಂದು ರಜನಿಕಾಂತ್ ಇಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

error: Content is protected !!