ಕೊಡಗಿನಲ್ಲಿ ರೂಪಾಂತರ ವೈರಸ್ ದೃಢಪಟ್ಟಿಲ್ಲ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ

December 30, 2020

ಮಡಿಕೇರಿ ಡಿ. 30 : ಬ್ರಿಟನ್ ನ ರೂಪಾಂತರ ವೈರಸ್ ಸೋಂಕು ಕೊಡಗು ಜಿಲ್ಲೆಯಲ್ಲಿ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಈ ವರೆಗೆ ಜಿಲ್ಲೆಯಲ್ಲಿ ರೂಪಾಂತರ ವೈರಸ್ ದೃಢಪಟ್ಟಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಸ್ವೀಕೃತವಾದ ಪಟ್ಟಿಯ ಪ್ರಕಾರ ಕೊಡಗು ಜಿಲ್ಲೆಗೆ 20 ಜನ ಬ್ರಿಟನ್ ನಿಂದ ಹಿಂದಿರುಗಿರುತ್ತಾರೆ.ಇವರಲ್ಲಿ 15 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 12 ಜನರ ಪರೀಕ್ಷಾ ವರದಿಯು ನೆಗೆಟಿವ್ ಬಂದಿದ್ದು, 3 ಜನರ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ.

ಉಳಿದ ಐದು ಜನರ ಪೈಕಿ ನಾಲ್ಕು ಜನರು ಬೇರೆ ಬೇರೆ ಜಿಲ್ಲೆಗಳಲ್ಲಿದ್ದು, ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲೆಯ ಸರ್ವೇಕ್ಷಣಾಧಿಕಾರಿಯವರಿಗೆ ನೀಡಲಾಗಿದೆ ಎಂದರು.

ಒಂದು ಪ್ರಕರಣ ಮಾತ್ರ ಇನ್ನೂ ಪತ್ತೆ ಹಚ್ಚುವ ಹಂತದಲ್ಲಿದೆ. ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿದ್ದು, ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಈ ವರೆಗೆ ಜಿಲ್ಲೆಯಲ್ಲಿ ಬ್ರಿಟನ್ ನ ರೂಪಾಂತರ ವೈರಸ್ ದೃಢಪಟ್ಟಿರುವುದಿಲ್ಲ. ಒಂದು ವೇಳೆ ದೃಢಪಟ್ಟರೂ ಪ್ರತ್ಯೇಕ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಿಕೊಳ್ಳಲಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದರು.