ಕ್ಷಮೆಯಾಚಿಸಿ ಕೊಡಗಿಗೆ ಬನ್ನಿ, ಇಲ್ಲ ಪ್ರತಿಭಟನೆ ಎದುರಿಸಿ : ಮಾಜಿ ಸಿಎಂ ಗೆ ಕೊಡವ ಸಮಾಜಗಳ ಒಕ್ಕೂಟ ಎಚ್ಚರಿಕೆ

30/12/2020

ಮಡಿಕೇರಿ ಡಿ.30 : ಕೊಡವರು ಕೂಡ ಗೋಮಾಂಸ ಸೇವಿಸುತ್ತಾರೆ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಕೊಡವರ ಕ್ಷಮೆಯಾಚಿಸದಿದ್ದಲ್ಲಿ ಕೊಡಗಿಗೆ ಬಂದಾಗ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಕೊಡವ ಸಮಾಜಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಬಾಳುಗೋಡಿನ ಕೊಡವ ಸಮಾಜದಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಲಾಯಿತು.
ಸಿದ್ದರಾಮಯ್ಯ ಅವರು ಬಹಿರಂಗವಾಗಿ ಕೊಡವರ ಕ್ಷಮೆಯಾಚಿಸದಿದ್ದಲ್ಲಿ ಜಿಲ್ಲೆಗೆ ಆಗಮಿಸುವ ಸಂದರ್ಭ ಪ್ರತಿಭಟನೆ ನಡೆಸುವುದು ಖಚಿತವೆಂದು ಪ್ರಮುಖರು ತಿಳಿಸಿದರು.
ಕ್ಯಾಪ್ಟನ್ ಚೇತನ್ ಎಂಬುವವರು ಕೊಡವರ ವಿರುದ್ಧ ಇಲ್ಲಸಲ್ಲದ ಆರೋಪಗಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಭೆ ಈ ವಿಚಾರವಾಗಿಯೇ ಸುದೀರ್ಘ ಚರ್ಚೆ ನಡೆಸಿತು. ಚೇತನ್ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ.ನಾಣಯ್ಯ ಅವರಿಗೆ ಜವಾಬ್ದಾರಿಯನ್ನು ನೀಡಲಾಯಿತು.
::: ಮದ್ಯಪಾನ ಬೇಡ :::
ಕೊಡವರ ವಿವಾಹದಲ್ಲಿ ಗಂಗಾಪೂಜೆಯ ಸಂದರ್ಭ ಮದ್ಯಪಾನದ ವ್ಯವಸ್ಥೆಯನ್ನು ಮಾಡಬಾರದು ಎನ್ನುವ ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಯೊಂದು ಕೊಡವ ಕುಟುಂಬಗಳು ಸಹಕಾರ ನೀಡಬೇಕೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಮನವಿ ಮಾಡಿದರು.
ಉಪಾಧ್ಯಕ್ಷರುಗಳಾದ ಮಾಳೇಟಿರ ಅಭಿಮನ್ಯುಕುಮಾರ್, ಮಲಚ್ಚೀರ ಬೋಸ್ ಚಿಟ್ಟಿಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಪೋಷಕ ಸದಸ್ಯರಾದ ಮೇರಿಯಂಡ ಸಿ.ನಾಣಯ್ಯ, ಖಾಯಂ ಸದಸ್ಯ ಮಲ್ಲೇಂಗಡ ದಾದಬೆಳ್ಯಪ್ಪ ಸೇರಿದಂತೆ ವಿವಿಧ ಕೊಡವ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು.
ವಾಟೇರಿರ ಶಂಕರಿ ಪೂವಯ್ಯ ಅವರು ಸ್ವಾಗತಿಸಿ, ವಂದಿಸಿದರು.