ಸುಂಟಿಕೊಪ್ಪದಲ್ಲಿ ಸರಣಿ ಕಳ್ಳತನ

30/12/2020

ಮಡಿಕೇರಿ ಡಿ.30: ಸುಂಟಿಕೊಪ್ಪ ಪಟ್ಟಣದಲ್ಲಿ ಸರಣಿ ಕಳ್ಳತನವಾಗಿದ್ದು, ಆರೋಪಿಯ ಪತ್ತೆಗಾಗಿ ಸುಂಟಿಕೊಪ್ಪ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಾದಾಪುರ ರಸ್ತೆಯಲ್ಲಿನ ಶ್ರೀ ಕೋದಂಡರಾಮ ದೇವಾಲಯದ ಬೀಗ ಮುರಿದು ಒಳನುಗ್ಗಿದ ಚೋರ ಹುಂಡಿಯನ್ನು ಒಡೆದು ಹಣಕ್ಕಾಗಿ ತಡಕಾಡಿದ್ದಾನೆ. ಹುಂಡಿಯ ಹಣ ದೇವಾಲಯ ಸಮಿತಿಯವರು ಇತ್ತೀಚೆಗಷ್ಟೇ ತೆಗೆದಿರುವುದರಿಂದ ಕಳ್ಳನ ಪ್ರಯತ್ನ ವಿಫಲವಾಗಿದೆ. ದೇವಾಲಯದ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಲುಂಗಿ ಶರ್ಟು ಧರಿಸಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕನ್ನಡಕ ಧರಿಸಿದ ಓರ್ವ ವ್ಯಕ್ತಿ ದೇವಾಲಯದ ಬೀಗ ಒಡೆದು ಒಳ ಪ್ರವೇಶಿಸಿದ ದೃಶ್ಯ ಕಂಡು ಬಂದಿದೆ, ದೇವಾಲಯದಲ್ಲಿ 5 ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದು, ಅದರಲ್ಲಿ 1 ಸಿಸಿ ಕ್ಯಾಮರಾವನ್ನು ಕದ್ದೊಯ್ಯಲಾಗಿದೆ.
ನಾಡಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಆರ್‍ಐ ಗ್ರಾಮಲೆಕ್ಕಿಗರ ಟೇಬಲ್ ಹಾಗೂ ಎಂಟು ಗಾಡ್ರೇಜ್ ಬೀರುವನ್ನು ತೆರೆದು ಚೆಲ್ಲಾಪಿಲ್ಲಿಗೊಳಿಸಿ ಕಂಪ್ಯೂಟರ್, ಲ್ಯಾಪ್‍ಟಾಪ್‍ಗಳನ್ನು ಮುಟ್ಟದೆ ಕಚೇರಿಯ 8 ಅಲ್ಮೆರಗಳ ಬೀಗವನ್ನು ಮುರಿದು ದಾಖಲಾತಿ ಪತ್ರ ಇನ್ನಿತರ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಹೊರಹೋಗಿದ್ದಾನೆ. ಅಲ್ಲದೇ ಪಕ್ಕದಲ್ಲೇ ಇರುವ ಸರಕಾರಿ ಪ್ರವಾಸಿ ಮಂದಿರದ ಬೀಗ ಒಡೆದು ಒಳನುಗಿದ್ದ ಕಳ್ಳರು ಅಲ್ಲಿಯೂ ಇದ್ದ ಅಲ್ಮೆರದಲ್ಲಿ ಇರಿಸಿದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾನೆ.
ಶುದ್ಧ ನೀರಿನ ಘಟಕದ ಬೀಗ ಒಡೆದು ಒಳನುಗ್ಗಿ ಅಲ್ಲಿಂದ ನೇರವಾಗಿ ಮದುರಮ್ಮ ಬಡಾವಣೆಯ ಎ.ಆರ್. ಅಸೋಷಿಯೇಟ್ಸ್ ಕಚೇರಿಗೆ ನುಗ್ಗಿ ಅಲ್ಲಿದ್ದ ಕಡತ ಚೆಲ್ಲಾಡಿ ಕಬೋರ್ಡು ಮುರಿದು ಅದರಲ್ಲಿದ್ದ 3,000 ರೂ ಅಪಹರಿಸಿಸಲಾಗಿದೆ.
ಅಲ್ಲದೆ ಮದುರಮ್ಮ ಬಡಾವಣೆಯ ಸ್ವಾಮಿ ಇಂಜಿನಿಯರ್ ವರ್ಕ್‍ನ ಮಾಲೀಕ ದಿ.ಗಂಗಾಧರ ಅವರ ಮನೆಯ 1 ಭಾಗದ ಬೀಗ ಒಡೆದು ಗಾಡ್ರೇಜ್ ಒಡೆದು ಜಾಲಾಡಿದ್ದು, ಏನೂ ಸಿಗದಿದ್ದ ಕಾರಣ ಮನೆಯ ಇನ್ನೊಂದು ಭಾಗದ ಬೀಗ ಒಡೆಯಲು ಪ್ರಯತ್ನಿಸಿದಾಗ ಮನೆಯ ಮಾಲೀಕ ಮನೋಹರಿ ಸದ್ದು ಕೇಳಿ ಕಿರುಚಿಕೊಂಡಾಗ ಕಳ್ಳ ಕಳ್ಳತನಕ್ಕೆ ತಂದಿದ್ದ ಸ್ಕೂಡ್ರೈವರ್, ಕಬ್ಬಿಣದ ರಾಡುಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಮನೆಯ ಮಾಲಕಿ ಟಿ.ಕೆ.ಮನೋಹರಿ ರಾತ್ರಿಯೇ ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲಿಸಿದ್ದಾರೆ.
ಸುಂಟಿಕೊಪ್ಪ 2ನೇ ವಿಭಾಗದ ಅಂಗನವಾಡಿ ಕೇಂದ್ರದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳ ಗಾಡ್ರೇಜ್ ಬೀರುವನ್ನು ತೆರೆದು ಚೆಲ್ಲಾಪಿಲ್ಲಿಗೊಳಿಸಿ ಅಲ್ಲಿಂದ ತೆರಳಿದ್ದಾನೆ.
ಈ ಸರಣಿ ಕಳ್ಳತನದಿಂದ ಸುಂಟಿಕೊಪ್ಪ ನಾಗರಿಕರು ಭಯಬೀತರಾಗಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಡಿ.ಎಸ್.ಪುನಿತ್ ಹಾಗೂ ಸಿಬ್ಬಂದಿಗಳು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.