ಕೊಡಗಿನ ನಾಲ್ಕು ಶಾಲೆಗಳಿಗೆ ಲ್ಯಾಪ್‍ಟಾಪ್ ಪ್ರೊಜೆಕ್ಟರ್ ಮತ್ತು ಸ್ಕ್ರೀನ್‍ಗಳ ವಿತರಣೆ

December 30, 2020

ಮಡಿಕೇರಿ ಡಿ.30 : ಯೂತ್ ಹಾಸ್ಟೆಲ್ ಅಸೋಷಿಯೇಷನ್ ಆಫ್ ಇಂಡಿಯಾದ ವತಿಯಿಂದ ಜಿಲ್ಲೆಯ ನಾಲ್ಕು ಶಾಲೆಗಳಿಗೆ ರೂ.70 ಸಾವಿರ ಮೌಲ್ಯದ ಲ್ಯಾಪ್‍ಟಾಪ್ ಪ್ರೊಜೆಕ್ಟರ್ ಮತ್ತು ಸ್ಕ್ರೀನ್‍ಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿತರಿಸಿದರು.
ವಿರಾಜಪೇಟೆ ತಾಲ್ಲೂಕಿನ ದೇವರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಲ್ಲೂಕಿನ ಭಾಗಮಂಡಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಲಮುರಿ ಶಾಲೆಯ ಮುಖ್ಯ ಶಿಕ್ಷಕರು ಜಿಲ್ಲಾಧಿಕಾರಿಯವರಿಂದ ಕೊಡುಗೆ ಸ್ವೀಕರಿಸಿದರು.
ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅವರು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯದ ಕೊಡುಗೆ ಅವಶ್ಯಕತೆ ಇದೆ ಮತ್ತು ಈ ನಿಟ್ಟಿನಲ್ಲಿ ಸಮುದಾಯ ಮತ್ತಷ್ಟು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕೊಡುಗೆಯನ್ನು ಪಡೆದ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷರಾದ ಪುರುಷೋತ್ತಮ್, ಕಾರ್ಯನಿರ್ವಹಣಾ ನಿರ್ದೇಶಕರಾದ ಅಯ್ಯಣ್ಣ, ಖಜಾಂಚಿಗಳಾದ ನಾಗೇಶ್ ಮತ್ತು ಜಿಲ್ಲಾ ಘಟಕದ ಡಾ.ತಿಮ್ಮಯ್ಯ, ರಾಜಶೇಖರ್ ಮತ್ತು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಶಿಕ್ಷಣಾಧಿಕಾರಿ ಕಾಂತರಾಜು, ಮಡಿಕೇರಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಗುರುರಾಜ್ ಅವರು ಇದ್ದರು.

error: Content is protected !!