ಗ್ರಾ.ಪಂ.ಚುನಾವಣೆ : ಕೊಡಗಿನಲ್ಲಿ ಸುಸೂತ್ರವಾಗಿ ನಡೆದ ಮತ ಎಣಿಕೆ ಕಾರ್ಯ

December 30, 2020

ಮಡಿಕೇರಿ ಡಿ.30 : ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಮತ ಎಣಿಕೆಯು ಜಿಲ್ಲೆಯ ನಗರದ ಸಂತ ಜೋಸೆಫರ ಶಾಲೆ, ವಿರಾಜಪೇಟೆ ಸಂತ ಅನ್ನಮ್ಮ ಶಾಲೆ ಮತ್ತು ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸುಸೂತ್ರವಾಗಿ ನಡೆಯಿತು.
ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು, ಮತ ಎಣಿಕೆ ಕೇಂದ್ರದ ಬಳಿ ನಿರ್ಮಿಸಲಾಗಿದ್ದ ಭದ್ರತಾ ಕೊಠಡಿಯನ್ನು 8 ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಚುನಾವಣಾ ವೀಕ್ಷಕರಾದ ಎ.ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರ ಸಮ್ಮುಖದಲ್ಲಿ ತೆರೆಯಲಾಯಿತು. ಮಡಿಕೇರಿ ತಾಲ್ಲೂಕು ನೋಡಲ್ ಅಧಿಕಾರಿ ನಿಲೇಶ್ ಸಿಂದೆ, ತಹಶೀಲ್ದಾರ್ ಮಹೇಶ್, ಡಿವೈಎಸ್‍ಪಿ ದಿನೇಶ್ ಕುಮಾರ್ ಇತರರು ಇದ್ದರು.
ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಜಿಲ್ಲೆಯ 101 ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿದ್ದು, ಮತ ಎಣಿಕೆಯು ಸುಸೂತ್ರವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಜನವರಿ, 01 ರಿಂದ ಶಾಲೆಗಳ ಆರಂಭ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು 1 ರಿಂದ 9 ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮ ಆರಂಭವಾಗಲಿದೆ. 10 ಮತ್ತು 12 ನೇ ತರಗತಿ ಆರಂಭವಾಗಲಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಶಾಲೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಒಂದು ಕೊಠಡಿಯಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬೇಕು ಎಂಬ ಬಗ್ಗೆ ಸರ್ಕಾರದ ಮಾರ್ಗಸೂಚಿ ಪಾಲಿಸಲಾಗುವುದು. ಪ್ರತಿಯೊಬ್ವರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಎಲ್ಲಾ ಶಾಲೆಗಳಲ್ಲಿ ಥರ್ಮೋ ಸ್ಕ್ಯಾನರ್ ಮೂಲಕ ತಪಾಸಣೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಇನ್ನಷ್ಟು ಮಾಹಿತಿ: ಜಿಲ್ಲೆಯ 101 ಗ್ರಾ.ಪಂ.ಗೆ ಚುನಾವಣೆ ನಡೆದಿತ್ತು. ಮಡಿಕೇರಿ ತಾಲ್ಲೂಕಿನ 26, ಸೋಮವಾರಪೇಟೆ ತಾಲ್ಲೂಕಿನ 40 ಮತ್ತು ವಿರಾಜಪೇಟೆ ತಾಲ್ಲೂಕಿನ 35 ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿತ್ತು.
ಮಡಿಕೇರಿ ತಾಲ್ಲೂಕಿನ 24, ಸೋಮವಾರಪೇಟೆ ತಾಲ್ಲೂಕಿನ 19 ಮತ್ತು ವಿರಾಜಪೇಟೆ ತಾಲ್ಲೂಕಿನ 54 ಒಟ್ಟು 97 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.
ಮಡಿಕೇರಿ ತಾಲ್ಲೂಕಿನ 108 ಕ್ಷೇತ್ರಗಳ 267 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 676 ಮಂದಿ ಕಣದಲ್ಲಿದ್ದರು. ಸೋಮವಾರಪೇಟೆ ತಾಲ್ಲೂಕಿನ 177 ಕ್ಷೇತ್ರಗಳ 462 ಸ್ಥಾನಗಳಿಗೆ 1488 ಮಂದಿ ಕಣದಲ್ಲಿದ್ದರು. ಹಾಗೆಯೇ ವಿರಾಜಪೇಟೆ ತಾಲ್ಲೂಕಿನ 136 ಕ್ಷೇತ್ರಗಳ 366 ಸ್ಥಾನಗಳಿಗೆ 924 ಮಂದಿ ಕಣದಲ್ಲಿದ್ದರು. ಜಿಲ್ಲೆಯಲ್ಲಿ ಒಟ್ಟು 421 ಕ್ಷೇತ್ರಗಳ 1095 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 3088 ಮಂದಿ ಕಣದಲ್ಲಿದ್ದರು.

error: Content is protected !!