ಕುಶಾಲನಗರದಲ್ಲಿ ಮತ ಎಣಿಕೆ : ಲಾಠಿ ಮೂಲಕ ಜನಜಂಗುಳಿ ಚದುರಿಸಿದ ಪೊಲೀಸರು

30/12/2020

ಸೋಮವಾರಪೇಟೆ ಡಿ.30 : ಸೋಮವಾರಪೇಟೆ ತಾಲೂಕಿನ 40 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಬುಧವಾರದಂದು ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 8ಗಂಟೆಗೆ ಆರಂಭವಾಯಿತು.
ಬೆಳಗ್ಗೆ 7 ಗಂಟೆ ವೇಳೆಗೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಅಭ್ಯರ್ಥಿಗಳ ಬೆಂಬಲಿಗರು ದಿಢೀರ್ ಎಣಿಕೆ ಕೇಂದ್ರದ ಒಳಗೆ ನುಗ್ಗಲು ಆರಂಭಿಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಗುಂಪುಗೂಡಿದ್ದವರನ್ನು ಚದುರಿಸಿದರು.
ಈ ಸಂದರ್ಭ ಸ್ಪರ್ಧಿಸಿದ್ದ ಅಭ್ಯರ್ಥಿ ಏಕ ಕಾಲಕ್ಕೆ ಮೊದಲನೆ ಮತ್ತು ಎರಡನೇ ಹಂತದ ಎಣಿಕೆಯ ಅಭ್ಯರ್ಥಿಗಳು ಮತ್ತು ಏಜೆಂಟರು ಪ್ರವೇಶದ್ವಾರದ ಒಳಗೆ ಪ್ರವೇಶಿಸಲು ಮುಂದಾದಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು ಈ ಸಂದರ್ಭ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೊಲೀಸರು ಗುಂಪನ್ನು ಚದುರಿಸಲು ಹರಸಾಹಸಪಟ್ಟರು. ನಂತರ ಮೊದಲನೆ ಹಂತದ ಅಭ್ಯರ್ಥಿಗಳು ಮತ್ತು ಏಜೆಂಟರುಗಳನ್ನು ಮಾತ್ರ ಒಳಗಡೆ ಪ್ರವೇಶಿಸಲು ಅನುವು ಮಾಡಿಕೊಟ್ಟು, ಉಳಿದವರನ್ನು ಪ್ರವೇಶದ್ವಾರದಿಂದ ಹೊರಹಾಕಿದ ನಂತರ ಪರಿಸ್ಥಿತಿ ತಿಳಿಯಿತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಡಗು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಅನಿಸ್ ಕಣ್ಮಣಿಜಾಯ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮತ್ತು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ್ ಖಂಡು ಭೇಟಿ ನೀಡಿ ತಹಶೀಲ್ದಾರ್ ಗೋವಿಂದರಾಜು ಹಾಗೂ ಡಿವೈಎಸ್‍ಪಿ ಶೈಲೇಂದ್ರ ಅವರಿಂದ ಮಾಹಿತಿ ಪಡೆದುಕೊಂಡರು.
ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ಅಭ್ಯರ್ಥಿ ಅಜೀಜ್ ಅವರು ಪ್ರವೇಶದ್ವಾರದ ಒಳಗೆ ಬಿಡುವಂತೆ ಕೋರಿಕೊಂಡಾಗ, ಕುಶಾಲನಗರ ಸಿಪಿಐ ಎಂ.ಮಹೇಶ್ ಅನುಮತಿ ನೀಡಲು ನಿರಾಕರಿಸಿದರು. ತಾನು ಓರ್ವ ಅಭ್ಯರ್ಥಿಯಾಗಿದ್ದು, ಒಳಗೆ ಬಿಡಬೇಕೆಂದು ಪರಿಪರಿಯಾಗಿ ಕೇಳಿಕೊಂಡರು. ಆದರೆ ಮತ್ತೆ ಅವಕಾಶ ನೀಡದ್ದರಿಂದ ಕೆಲಕಾಲ ಅಜೀಜ್ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಮಧ್ಯಾಹ್ನ 3ರವರೆಗೂ ಮೊದಲನೆ ಸುತ್ತಿನ ಎಣಿಕೆ ಕಾರ್ಯ ಮುಗಿಯದೆ ಅಭ್ಯರ್ಥಿಗಳು ಹೊರಗಡೆ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಮಧ್ಯಾಹ್ನ ಊಟದ ವಿರಾಮದ ವೇಳೆಗೆ ಶೇ.30ರಷ್ಟು ಮತ ಎಣಿಕೆ ಪ್ರಕ್ರಿಯೆ ಮಾತ್ರ ಮುಗಿದಿತ್ತು.
ಮೂರು ಕ್ಷೇತ್ರದಲ್ಲಿ ಮರು ಎಣಿಕೆ
ತೊರೆನೂರು ಗ್ರಾಮ ಪಂಚಾಯಿತಿಯ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾದರೂ ಸಂಜೆ 4ರವರೆಗೂ ಮೊದಲನೆ ಹಂತದ ಮತ ಎಣಿಕೆ ಪೂರ್ಣಗೊಂಡಿರಲಿಲ್ಲ.