ಅಬ್ಬರದ ಪಾರ್ಟಿಗಳಿಗೆ ಕಡಿವಾಣ : ರೂಪಾಂತರಿ ಕೊರೋನಾ ಹರಡುವುದನ್ನು ತಡೆಯಲು ಸಹಕರಿಸಿ : ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್ ಮನವಿ

ಮಡಿಕೇರಿ ಡಿ.31 : ರೂಪಾಂತರಿ ಕೊರೋನಾ ಹರಡುವುದನ್ನು ತಡೆಯಲು ಹೊಂಸ್ಟೇ, ರೆಸಾರ್ಟ್, ಲಾಡ್ಜ್, ಅತಿಥಿಗೃಹಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಗಳನ್ನು ಪಾಲಿಸುವುದು ಮತ್ತು ಅಬ್ಬರದ ಪಾರ್ಟಿಗಳಿಗೆ ಕಡಿವಾಣ ಹಾಕುವುದು ಕಡ್ಡಾಯವೆಂದು ಮಡಿಕೇರಿ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಪೆÇಲೀಸ್ ಇಲಾಖೆ ವತಿಯಿಂದ ನಗರದ ಕೊಡವ ಸಮಾಜದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಹೊಸ ವರ್ಷಾಚರಣೆಗಾಗಿ ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸರ್ಕಾರದ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಪ್ರವಾಸಿಗರೂ ಸೇರಿದಂತೆ ಮಾಲೀಕರೂ ಪಾಲಿಸಬೇಕೆಂದು ಹೇಳಿದರು. ರೂಪಾಂತರಿ ಕೊರೋನಾ ವೈರಸ್ ಹರಡದಂತೆ ತಡೆಯಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್ ಗಳನ್ನು ಹಾಕಬೇಕು, ಶಬ್ದ ಮಾಲಿನ್ಯವಾಗುವ ಮೋಜು ಮಸ್ತಿಗೆ ಅವಕಾಶ ನೀಡಬಾರದು, ಪ್ರತಿ ಪ್ರವಾಸಿಗನ ವಿಳಾಸವನ್ನು ಬರೆದಿಡಬೇಕು, ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತ್ತಿಲ್ಲವೆಂದು ದಿನೇಶ್ ಕುಮಾರ್ ತಿಳಿಸಿದರು.
ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನ ಸೇರಬಾರದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಕಾನೂನು ಉಲ್ಲಂಘನೆಯಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ದಿನೇಶ್ ಕುಮಾರ್ ತಿಳಿಸಿದರು.
ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಹಾಗೂ ವಿವಿಧ ಹೊಂಸ್ಟೇ, ರೆಸಾರ್ಟ್, ಲಾಡ್ಜ್ಗಳ ಮಾಲೀಕರುಗಳು ಉಪಸ್ಥಿತರಿದ್ದರು.

