ವರ್ಷದ ಹಿನ್ನೋಟ : ಸಾವು ನೋವಿನಲ್ಲೇ ಕಳೆಯಿತು 2020 : ಮಹಾಮಳೆ, ಕೋವಿಡ್‍ಗೆ ಕೊಡಗು ತತ್ತರ

January 1, 2021

ಮಡಿಕೇರಿ ಡಿ.31 : ಸದಾ ಹಸಿರಿನಿಂದ ಕೂಡಿರುವ ಕಾವೇರಿನಾಡು ಕೊಡಗು ಸಾವು, ನೋವುಗಳ ನಡುವೆಯೇ 2020 ಗೆ ವಿದಾಯ ಹೇಳಿದೆ. ಪ್ರತಿವರ್ಷದಂತೆ ಮಹಾಮಳೆ ಈ ಬಾರಿಯೂ ಕಾಡಿತ್ತಲ್ಲದೆ, ಕೋವಿಡ್ ಕಾಟದಿಂದ ಜಿಲ್ಲೆಯ ಜನ ತತ್ತರಿಸಿ ಹೋದರು.
ಪ್ರವಾಸೋದ್ಯಮದ ಮೂಲಕವೇ ಹೊಸ ಭರವಸೆಗಳನ್ನು ಹೊತ್ತು ಮುಂದೆ ಸಾಗುತ್ತಿರುವ ದಕ್ಷಿಣ ಕಾಶ್ಮೀರವೆಂದೇ ಹೆಸರಾದ ಕೊಡಗು ಸಾಕಷ್ಟ ಕಷ್ಟ, ನಷ್ಟಗಳನ್ನು ಅನುಭವಿಸಿತು. ವರ್ಷದ ಆರಂಭದಲ್ಲೇ ನಿರಾಶಾದಾಯಕ ದಿನಗಳನ್ನು ಕಂಡ ಜಿಲ್ಲೆ ಮಾರ್ಚ್ ವೇಳೆಗೆ ಕೊರೋನಾ ಲಾಕ್ ಡೌನ್‍ನಿಂದಾಗಿ ತತ್ತರಿಸಿ ಹೋಯಿತು. ಕಾಫಿ ತೋಟಗಳೇ ಹೆಚ್ಚಾಗಿ ಇರುವುದರಿಂದ ಕೂಲಿಯನ್ನು ನಂಬಿ ಜೀವನ ಸಾಗಿಸುವ ಲಕ್ಷಕ್ಕೂ ಅಧಿಕ ಕಾರ್ಮಿಕರು ಅತಂತ್ರರಾದರು. ದುಡಿಮೆ ಇಲ್ಲದೆ ಪರಿತಪಿಸುವ ಪರಿಸ್ಥಿತಿ ಎದುರಾಯಿತು. ಕಾರ್ಮಿಕರನ್ನೇ ನಂಬಿ ತೋಟಗಳನ್ನು ನಿರ್ವಹಿಸುತ್ತಿರುವ ಮಾಲೀಕ ವರ್ಗ ಕೂಡ ನಷ್ಟವನ್ನು ಅನುಭವಿಸಿತು.
ಸುಮಾರು 5,700 ಕ್ಕೂ ಅಧಿಕ ಮಂದಿ ಕೋವಿಡ್ ಸೋಂಕಿಗೆ ತುತ್ತಾದರೆ 78 ಮಂದಿ ವೈರಸ್ ಗೆ ಸಿಲುಕಿ ಮೃತಪಟ್ಟರು. ಲಾಕ್ ಡೌನ್‍ನಿಂದಾಗಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಂತೆ ಜಿಲ್ಲೆಯ ಸುಮಾರು 170 ಖಾಸಗಿ ಬಸ್ ಗಳು ಕೂಡ ಸುದೀರ್ಘ ಕಾಲ ಸ್ಥಗಿತಗೊಂಡು ಇತಿಹಾಸವನ್ನು ಸೃಷ್ಟಿಸಿದವು. ಕುಗ್ರಾಮಗಳೇ ಹೆಚ್ಚಾಗಿರುವ ಕೊಡಗು ಜಿಲ್ಲೆಯ ಗ್ರಾಮೀಣರು ಖಾಸಗಿ ಬಸ್ ಗಳನ್ನೇ ಸಂಪರ್ಕಕ್ಕಾಗಿ ಅವಲಂಬಿಸಿದ್ದಾರೆ. ಆದರೆ ಕೊರೋನಾ ಆತಂಕ ಬಸ್‍ಗಳ ಸಂಚಾರಕ್ಕೆ ದೊಡ್ಡ ಅಡ್ಡಿಯನ್ನುಂಟು ಮಾಡಿತು. ತೀವ್ರ ನಷ್ಟ ಅನುಭವಿಸಿದ ಖಾಸಗಿ ಬಸ್ ಮಾಲೀಕರುಗಳು ತೆರಿಗೆ ಹಣ ಪಾವತಿಸಲಾಗದೆ ಬಸ್‍ಗಳನ್ನು ಪ್ರಾದೇಶಿಕ ಕಚೇರಿಯ ಅಧೀನಕ್ಕೆ ಒಪ್ಪಿಸಿದ ಪ್ರಸಂಗವೂ ನಡೆಯಿತು.
ಪ್ರವಾಸಿಗರಿಂದ ಸದಾ ತುಂಬಿರುತ್ತಿದ್ದ ಹೋಂಸ್ಟೇ, ಹೊಟೇಲ್, ಲಾಡ್ಜ್‍ಗಳು ಬಣಗುಡಲಾರಂಭಿಸಿ ಮಾಲೀಕರುಗಳು ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಾದ ಹೀನಾ ಸ್ಥಿತಿಯೂ ಎದುರಾಯಿತು.
ಕೋವಿಡ್ ಸಂಕಷ್ಟದಿಂದ ಸುಧಾರಿಸಿಕೊಳ್ಳುವ ಮೊದಲೇ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯನ್ನು ಅತಿಯಾಗಿ ಕಾಡಿದ್ದು ಮಹಾಮಳೆ. ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಭಾಗದಲ್ಲಿ ಭಾರೀ ಗಾಳಿ ಮಳೆಗೆ ಗಜಗಿರಿ ಬೆಟ್ಟ ಕುಸಿದು ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ದಾರುಣವಾಗಿ ಮೃತಪಟ್ಟರು.
ನಾರಾಯಣ ಆಚಾರ್, ಅವರ ಪತ್ನಿ, ಸಹೋದರ ಹಾಗೂ ಸಹಾಯಕ್ಕಾಗಿ ಇದ್ದ ಇಬ್ಬರು ಅರ್ಚಕರು ಕುಸಿದ ಬೆಟ್ಟದ ಮಣ್ಣಿನಡಿ ಸಿಲುಕಿ ಮೃತರಾದರು. ಜಾನುವಾರುಗಳು ಮತ್ತು ವಾಸದ ಮನೆ ನೆಲಸಮವಾಯಿತು. ಶವಗಳನ್ನು ಹೊರತೆಗೆಯಲು ಸುಮಾರು 10 ದಿನಗಳ ಕಾಲ ಹರಸಾಹಸ ಪಟ್ಟ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಎನ್‍ಡಿಆರ್‍ಎಫ್ ಹಾಗೂ ಜನಪ್ರತಿನಿಧಿಗಳು ಜನರ ಮೆಚ್ಚುಗೆಗೆ ಪಾತ್ರರಾದರು. ಆದರೆ ಇಂದಿಗೂ ಪತ್ನಿ ಶಾಂತ ಹಾಗೂ ಕಾಸರಗೋಡು ಮೂಲದ ಸಹಾಯಕ ಅರ್ಚಕ ಶ್ರೀನಿವಾಸ ಅವರ ಮೃತದೇಹಗಳು ಪತ್ತೆಯಾಗಿಲ್ಲ.
ನಂತರದ ದಿನಗಳಲ್ಲಿ ಗಜಗಿರಿ ಬೆಟ್ಟಕ್ಕೆ ಭೇಟಿ ನೀಡಿದ ಭೂವಿಜ್ಞಾನಿಗಳು ಬೆಟ್ಟದ ಮೇಲೆ ತೆಗೆದಿರುವ ಇಂಗು ಗುಂಡಿಗಳೇ ಅನಾಹುತಕ್ಕೆ ಕಾರಣವೆಂದು ಹೇಳಿದರು. ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಇಂಗು ಗುಂಡಿ ಮುಚ್ಚಲು ಆದೇಶಿಸಿದರು.
ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ದಕ್ಷಿಣ ಕೊಡಗಿನ ಹಲವು ಭಾಗ ಮತ್ತು ಕುಶಾಲನಗರ ಜಲಾವೃತಗೊಂಡು ಬೆಳೆಗಾರರು ಹಾಗೂ ರೈತರು ಕಷ್ಟ ಅನುಭವಿಸಿದರು. ಸಿದ್ದಾಪುರ, ಕರಡಿಗೋಡು ಭಾಗದಲ್ಲೂ ಹಾನಿ ಉಂಟಾಯಿತು. ಆದರೆ 2019 ರಲ್ಲಿ ಮಹಾಮಳೆಯಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 2020 ರಲ್ಲೂ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಸರ್ಕಾರ ವಿಫಲವಾಯಿತು. ಮನೆಗಳ ನಿರ್ಮಾಣಕ್ಕೆ ಜಾಗವನ್ನು ಗುರುತಿಸುವ ಕಾರ್ಯ ಕೂಡ ನಡೆದಿಲ್ಲ.
::: ಕಾಡಿದ ವನ್ಯಜೀವಿಗಳು :::
ವನ್ಯಜೀವಿಗಳಾದ ಹುಲಿ ಮತ್ತು ಆನೆಗಳು ಕೊಡಗಿನ ಜನರನ್ನು ಅತಿಯಾಗಿ ಕಾಡಿದವು. ದಕ್ಷಿಣ ಕೊಡಗಿನಲ್ಲಿ ಸುಮಾರು 70 ಕ್ಕೂ ಹೆಚ್ಚು ಜಾನುವಾರುಗಳು ಹುಲಿಗಳಿಗೆ ಬಲಿಯಾಯಿತು. ಕಾಡಾನೆ ದಾಳಿ ನಿರಂತರವಾಗಿ ಇತ್ತಾದರೂ ಮಾನವ ಜೀವಹಾನಿ ಕಡಿಮೆ ಸಂಖ್ಯೆಯಲ್ಲಾಗಿದೆ. ವರ್ಷದ ಕೊನೆಯಲ್ಲಿ ನಾಗರಹೊಳೆ ಅರಣ್ಯ ಸಿಬ್ಬಂದಿ ಹಾಗೂ ಪೇರೂರು ಗ್ರಾಮದ ವ್ಯಕ್ತಿಯೊಬ್ಬರು ಕಾಡಾನೆಗೆ ಬಲಿಯಾದರು. ಕುಟ್ಟದಲ್ಲಿ ವಿದ್ಯುತ್ ತಂತಿ ತಗುಲಿ, ಅಂದಗೋವೆಯಲ್ಲಿ ಸೋಲಾರ್ ಬೇಲಿ ಅವಘಡ ಮತ್ತು ಯಡೂರು ಗ್ರಾಮದಲ್ಲಿ ಹೊಟ್ಟೆ ನೋವಿನಿಂದ ಗರ್ಭಿಣಿ ಆನೆ ಸೇರಿ ಒಟ್ಟು ಮೂರು ಕಾಡಾನೆಗಳು ಅಸಹಜ ರೀತಿಯಲ್ಲಿ ಮೃತಪಟ್ಟವು.
ಗೋಣಿಕೊಪ್ಪ ಸಮೀಪದ ಹೊಸೂರು ಕಳತ್ಮಾಡು ವ್ಯಾಪ್ತಿಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಪುಂಡಾನೆಯನ್ನು ದೇವರಪುರ ಬಳಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು. ಶ್ರೀಮಂಗಲದಲ್ಲಿ ಜಾನುವಾರುಗಳನ್ನು ಭಕ್ಷಿಸುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲಾಯಿತು. ಬಾಳೆಲೆ ಗ್ರಾಮದಲ್ಲಿ ಹಂದಿಗೆಂದು ಇರಿಸಲಾಗಿದ್ದ ಬಲೆಯಲ್ಲಿ ಹುಲಿ ಸೆರೆಯಾಯಿತು.
ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಬೆಲೆ ಬಾಳುವ ಮರಗಳನ್ನು ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.
::: ಪ್ರತಿಭಟನೆಗಳು ನಡೆದವು :::
ಕೋವಿಡ್ ಕಾಲವಾದರೂ ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ನಡೆಸುವುದನ್ನು ಮರೆಯಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸುಮಾರು 15 ಪ್ರತಿಭಟನೆಗಳನ್ನು ನಡೆಸಿದರೆ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಜೆಡಿಎಸ್ ಅನೇಕ ಪ್ರತಿಭಟನೆಗಳನ್ನು ಹಮ್ಮಿಕೊಂಡಿತು.
ಕೊಡವರು ಗೋಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೊಡವರು ತಿರುಗಿ ಬಿದ್ದು ಪ್ರತಿಭಟನೆಗಳು ನಡೆದವು. ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲೆಯಾದ್ಯಂತ ಕೊಡವರು ಬೆಂಬಲ ವ್ಯಕ್ತಪಡಿಸಿದರು. ಸಿಪಿಐಎಂ, ಎಸ್‍ಡಿಪಿಐ ಕೂಡ ಪ್ರತಿಭಟನೆಗಳನ್ನು ನಡೆಸಿದರು. ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಕೊಡಗಿನ ರೈತ ಸಂಘಟನೆಗಳ ರಸ್ತೆ ತಡೆ ಪ್ರತಿಭಟನೆ ನಡೆಸಿದವು.
::: ಕ್ರೀಡಾ ಪ್ರಶಸ್ತಿ ಸಿಂಹಪಾಲು :::
ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಕೊಡಗಿನವರಿಗೆ ಸಿಂಹಪಾಲು ಲಭಿಸಿತು. 2017ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಪೆÇನ್ನಂಪೇಟೆಯ ಕಂಬೀರಂಡ ಪೆÇನ್ನಮ್ಮ(ಹಾಕಿ) ಭಾಜನರಾದರೆ, 2018ನೇ ಸಾಲಿನ ಏಕಲವ್ಯ ಪ್ರಶಸ್ತಿ ನಿಖಿನ್ ತಿಮ್ಮಯ್ಯ(ಹಾಕಿ) ಹಾಗೂ 2019ನೇ ಸಾಲಿನ ಏಕಲವ್ಯ ಪ್ರಶಸ್ತಿ ಲೋಕೇಶ್ ತಿಮ್ಮಣ್ಣ(ಹಾಕಿ) ಅವರಿಗೆ ಒಲಿಯಿತು.
ಜೀವಮಾನ ಸಾಧನೆಗಾಗಿನ ಪ್ರಶಸ್ತಿಗಾಗಿ ಸಿ.ಎ. ಕರುಂಬಯ್ಯ(ಹಾಕಿ) ಬೆಂಗಳೂರು ಹಾಗೂ 2018ರ ಕ್ರೀಡಾರತ್ನ ಪ್ರಶಸ್ತಿಗಾಗಿ ಸೋಮವಾರಪೇಟೆಯ ಬಿ.ಡಿ.ಲಾವಣ್ಯ(ಬಾಲ್ ಬ್ಯಾಡ್ಮಿಂಟನ್) ಅವರುಗಳು ಭಾಜನರಾದರು.
::: ಸೇನಾ ಸಾಧನೆ :::
ಭಾರತೀಯ ಭೂ ಸೇನೆಯಲ್ಲಿ ಒಂದು ವರ್ಷದ ತರಬೇತಿಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ “ಸೋರ್ಡ್ ಆಫ್ ಹಾನರ್” ಮತ್ತು ರಾಷ್ಟ್ರಪತಿಗಳ ಚಿನ್ನದ ಪದಕ”ದೊಂದಿಗೆ ಲೆಫ್ಟಿನೆಂಟ್ ಆಗಿ ಕೊಡಗಿನ ಕುವರ ಚೋಳಂಡ ವರುಣ್ ಗಣಪತಿ ಹೊರಹೊಮ್ಮಿದರು.
ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಪೈಲೆಟ್ (ಫೈಟರ್ ಪೈಲೆಟ್) ಆಗಿ ಸೈನಿಕ ಪರಂಪರೆಗೆ ಹೆಸರಾದ ಕೊಡಗು ಜಿಲ್ಲೆಯ ಯುವತಿಯೊಬ್ಬರು ಆಯ್ಕೆಯಾಗುವ ಮೂಲಕ ಸೇನಾ ಇತಿಹಾಸಕ್ಕೆ ಹೊಸತೊಂದು ಗರಿ ಮೂಡಿಸಿದರು. ಮೂಲತ: ಚೆಂಬೆಬೆಳ್ಳೂರಿನವರಾದ ಕೊಳುವಂಡ ದಿ. ನಂಜಪ್ಪ ಹಾಗೂ ಅನು ನಂಜಪ್ಪ ದಂಪತಿಯ ಪುತ್ರಿ ಪುಣ್ಯನಂಜಪ್ಪ ಈ ಸಾಧನೆ ಮಾಡಿರುವ ವೀರ ವನಿತೆಯಾಗಿದ್ದಾಳೆ.
ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಛಿಚಿಠಿಣ. ಡಾ.ದೇವಿಪ್ರಸಾದ್ ಭಾರತೀಯ ಸೇನೆಯಲ್ಲಿ ಠಿeಡಿmಚಿಟಿeಟಿಣ ಛಿommissioಟಿ ಆಗಿ ಆಯ್ಕೆಯಾದರು. ಇವರು ಪ್ರಸ್ತುತ ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮಡಿಕೇರಿಯಲ್ಲಿ ವೀರಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
::: ಮಾದಕ ವಸ್ತು ದಂಧೆ :::
ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಅತ್ಯಾಧುನಿಕ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೆÇಲೀಸ್ ಅಪರಾಧ ಪತ್ತೆ ದಳ ಯಶಸ್ವಿಯಾಯಿತು.
ಜಿಲ್ಲೆಯ ಅಯ್ಯಂಗೇರಿ ಗ್ರಾಮದ ಮಜೀದ್ (ಸೂಫಿ), ಶಿಯಾಬುದ್ದೀನ್(32) ಬೆಂಗಳೂರು ಶಿವಾಜಿನಗರದ ಮುಜಾಮಿಲ್ (31) ಎಂಬವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ ಅಂಪೆಟಮೈನ್ (ಎಂಡಿಎಂಎ) ಎಂಬ 300 ಗ್ರಾಂ.ನಷ್ಟು ಮಾದಕ ವಸ್ತು ಹಾಗೂ ಟಾಟಾ ಇಂಡಿಕಾ (ಕೆಎ50-9941) ಕಾರನ್ನು ವಶಪಡಿಸಿಕೊಂಡರು. ವಿವಿಧ ಗಾಂಜಾ ಪ್ರಕರಣಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಗಾಂಜಾ ದಂಧೆಗೆ ಕಡಿವಾಣ ಹಾಕಿದರು.
ದಕ್ಷ ಅಧಿಕಾರಿಯೆಂದೇ ಹೆಸರಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಎರಡು ವರ್ಷಗಳ ಸೇವೆಯ ನಂತರ ಕೊಡಗಿನಿಂದ ವರ್ಗಾವಣೆಗೊಂಡು ನೂತನ ಎಸ್‍ಪಿಯಾಗಿ ಕ್ಷಮಾ ಮಿಶ್ರ ಅಧಿಕಾರ ವಹಿಸಿಕೊಂಡರು.
ಕೋವಿಡ್ ಮಾರ್ಗಸೂಚಿಗಳ ನಡುವೆಯೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿತು. ಕುಶಾಲನಗರ, ವಿರಾಜಪೇಟೆ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ನೇಮಕವಾಯಿತು. ಜೆಡಿಎಸ್‍ನÀಲ್ಲಿದ್ದ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ವರ್ಷದ ಕೊನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ವರ್ಷದ ಕೊನೆಯಲ್ಲಿ ಗ್ರಾ.ಪಂ ಚುನಾವಣೆಯ ಅಬ್ಬರಕ್ಕೆ ತೆರೆ ಬಿತ್ತು.
ನೂತನ ಪೊನ್ನಂಪೇಟೆ ತಾಲ್ಲೂಕು ಇದೇ ವರ್ಷ ಅಧಿಕೃತವಾಗಿ ಕಾರ್ಯಾರಂಭಗೊಂಡಿತು. ಕೋವಿಡ್ ಕಾರಣಕ್ಕಾಗಿ ಜಿಲ್ಲೆಯ ಶಾಲೆಗಳು ಬಿಕೋ ಎನ್ನುತ್ತಿದ್ದವು. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸಿದರು.
ಒಟ್ಟಿನಲ್ಲಿ ಸಾವು, ನೋವುಗಳ ವರ್ಷವೆಂದೇ ಅಪಖ್ಯಾತಿಗೆ ಗುರಿಯಾದ 2020 ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದು, 2021 ಹೊಸ ವರ್ಷವಾದರೂ ಸರ್ವರಿಗೆ ಹರ್ಷವನ್ನು ತರಲಿ ಎಂದು ಹಾರೈಕೆ.

error: Content is protected !!