ಹುಲಿ ದಾಳಿಗೆ ಹಸು ಬಲಿ : ಕೊಟ್ಟಗೇರಿಯಲ್ಲಿ ಘಟನೆ

January 1, 2021

ಮಡಿಕೇರಿ ಜ. 1 : ದಕ್ಷಿಣ ಕೊಡಗಿನಲ್ಲಿ ಹುಲಿ ಉಪಟಳ ಮಿತಿ ಮೀರಿದ್ದು, ಇಂದು ವ್ಯಾಘ್ರನ ದಾಳಿಗೆ ಹಸುವೊಂದು ಬಲಿಯಾಗಿದೆ. ಬಾಳೆಲೆಯ ಕೊಟ್ಟಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಗ್ರಾಮದ ನಿವಾಸಿ ಮೇಚಿಯಂಡ ಸಾಬು ಎಂಬುವವರ ಹಸುವನ್ನು ಮೇಯಲು ಬಿಟ್ಟಿದ್ದಾಗ ಹುಲಿ ದಾಳಿಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಉರುಳಿಗೆ ಬಿದ್ದ ಹುಲಿಯೊಂದು ಸೆರೆಯಾದ ನಂತರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೆ ಹುಲಿ ದಾಳಿಯಾಗಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಪರಿಹಾರ ನೀಡದೆ ಇರುವ ಬಗ್ಗೆ ಮಾಲೀಕ ಸಾಬು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!