ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕೊಡಗಿನಲ್ಲಿ ಶಾಲೆಗಳು ಆರಂಭ : ವಿದ್ಯಾರ್ಥಿಗಳಲ್ಲಿ ಹರ್ಷ

01/01/2021

ಮಡಿಕೇರಿ ಜ.1 : ಕೋವಿಡ್ ಕಾರಣಕ್ಕಾಗಿ ಕಳೆದ ಏಳು ತಿಂಗಳುಗಳಿಂದ ಬಂದ್ ಆಗಿದ್ದ ಕೊಡಗಿನ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಸರ್ಕಾರದ ಆದೇಶದಂತೆ ಇಂದು ಆರಂಭಗೊಂಡವು. 1 ರಿಂದ 9 ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮಕ್ಕೆ ಕೂಡ ಚಾಲನೆ ನೀಡಲಾಯಿತು.
ಸರಕಾರಿ ಪ್ರೌಢಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಬರಮಾಡಿಕೊಳ್ಳಲಾಯಿತು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡ ವಿದ್ಯಾರ್ಥಿಗಳು ಲವಲವಿಕೆಯಿಂದ ತರಗತಿಗಳನ್ನು ಪ್ರವೇಶಿಸಿದರು.
ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಪುನರ್ ಆರಂಭಿಸಲಾಯಿತು. 7ನೇ ತರಗತಿಯ 14 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಶಾಲೆಯಲ್ಲಿ ಕುಡಿಯಲು ಶುದ್ಧ ಬಿಸಿನೀರು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಶಾಲೆಗಳಲ್ಲಿ ಥರ್ಮೋ ಸ್ಕ್ಯಾನರ್ ಮೂಲಕ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಯಿತು. ಸ್ಯಾನಿಟೈಸರ್ ವ್ಯವಸ್ಥೆಯೊಂದಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.
ಆರಂಭದ ದಿನವಾದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತಾದರೂ ಸೋಮವಾರದಿಂದ ಎಲ್ಲಾ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬಹುದೆಂದು ವಿಶ್ವಾಸ ವ್ಯಕ್ತಪಡಿಸಿರುವ ಶಿಕ್ಷಣಾಧಿಕಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ಗುರುರಾಜ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪುಟ್ಟರಂಗನಾಥ ಹಾಜರಿದ್ದರು.