ಪಾಕ್ ಪರ ಘೋಷಣೆಗೆ ಖಂಡನೆ : ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ

02/01/2021

ಮಡಿಕೇರಿ ಜ.2 : ಗ್ರಾ.ಪಂ ಚುನಾವಣೆ ಮತ ಎಣಿಕೆ ಸಂದರ್ಭ ಮಂಗಳೂರಿನ ಉಜಿರೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರ ಬಿಜೆಪಿ ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಪಕ್ಷದ ನಗರಾಧ್ಯಕ್ಷ ಮನುಮಂಜುನಾಥ್ ಮಾತನಾಡಿ, ಭಾರತ ದೇಶದ ಮೂಲಭೂತ ಸೌಲಭ್ಯ ಪಡೆದುಕೊಂಡು ಶತ್ರು ರಾಷ್ಟ್ರ ಪಾಕ್ ಪರ ಘೋಷಣೆಗಳನ್ನು ಕೂಗುವವರು ದೇಶ ದ್ರೋಹಿಗಳು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿರಲಾಗದವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಒತ್ತಾಯಿಸಿದ ಅವರು, ಎಸ್‍ಡಿಪಿಐ ಮತ್ತು ಪಿಎಫ್‍ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದರು.
ಬಿಜೆಪಿ ವಕ್ತಾರ ಮಹೇಶ್ ಜೈನಿ ಮಾತನಾಡಿ, ಎರಡು ಸಂಘಟನೆಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕಣಗಳಲ್ಲೂ ಇವರ ಪಾತ್ರ ಇರುವುದು ಸಾಬೀತಾಗಿದೆ ಎಂದು ಆರೋಪಿಸಿದರು.
ದೇಶ ವಿರೋಧಿ ಘೋಷಣೆ ಕೂಗಿದವರನ್ನು ತಕ್ಷಣ ಗಡಿಪಾರು ಮಾಡಬೇಕು ಮತ್ತು ದೇಶ ದ್ರೋಹಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಅನಿತಾಪೂವಯ್ಯ ಮಾತನಾಡಿ, ಭಾರತ ದೇಶದ ವಿರುದ್ಧ ಘೋಷಣೆಗಳನ್ನು ಕೂಗಿದವರನ್ನು ತನಿಖೆಗೆ ಒಳಪಡಿಸಿ ಪ್ರಮುಖ ದಾಖಲೆಗಳನ್ನು ಪರಿಶೀಲಿಸಬೇಕೆಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಅರುಣ, ನಗರ ಪ್ರಧಾನ ಕಾರ್ಯದರ್ಶಿ ಅಪಣ್ಣ, ಉಪಾಧ್ಯಕ್ಷ ಬಿ.ಕೆ.ಜಗದೀಶ್, ಯುವ ಮೋರ್ಚಾದ ಅಧ್ಯಕ್ಷ ನವೀನ್ ಪೂಜಾರಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಪೂಣಚ್ಚ, ನಗರಸಭಾ ಮಾಜಿ ಸದಸ್ಯ ಟಿ.ಎಸ್.ಪ್ರಕಾಶ್, ಮಹಿಳಾ ಮೋರ್ಚಾದÀ ಉಪಾಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಕನ್ನಿಕೆ, ನಗರಾಧ್ಯಕ್ಷೆ ಸವಿತಾರಾಕೇಶ್, ಪ್ರಮುಖರಾದ ಕಲಾವತಿ, ಗೌರಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.