ಮಡಿಕೇರಿ ನಗರದ ಅಭಿವೃದ್ಧಿಗೆ ಶಾಸಕರು ಅನುದಾನ ತರಲಿ : ಜೆಡಿಎಸ್ ಆಗ್ರಹ : ಅಹೋರಾತ್ರಿ ಪ್ರತಿಭಟನೆಯ ಎಚ್ಚರಿಕೆ

January 2, 2021

ಮಡಿಕೇರಿ ಜ.2 : ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದ ಅಭಿವೃದ್ಧಿಗೆ ಅಗತ್ಯವಿರುವಷ್ಟು ಅನುದಾನ ತರುವಲ್ಲಿ ಜಿಲ್ಲೆಯ ಶಾಸಕರುಗಳು ವಿಫಲರಾಗಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ. ಶಾಸಕರುಗಳಿಂದ ಅನುದಾನ ತರಲು ಸಾಧ್ಯವಾಗದಿದ್ದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಹಕಾರದೊಂದಿಗೆ ಸರ್ಕಾರದ ಬಳಿ ತೆರಳಿ ನಾವೇ ಅನುದಾನ ತರುತ್ತೇವೆ ಎಂದು ಅವರು ತಿಳಿಸಿದ್ದಾರೆ.
ನಗರಸಭಾ ಪೌರಾಯುಕ್ತ ರಾಮದಾಸ್ ಅವರೊಂದಿಗೆ ನಗರದ ವಿವಿಧ ಬಡಾವಣೆಗಳಿಗೆ ತೆರಳಿದ ಗಣೇಶ್, ರಸ್ತೆ ಮತ್ತು ಚರಂಡಿಗಳ ಅವ್ಯವಸ್ಥೆ ಬಗ್ಗೆ ವಿವರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೌರಾಯುಕ್ತರು ಸಿದ್ಧಪಡಿಸುವ ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆಯೊಂದಿಗೆ ಸರ್ಕಾರದ ಬಳಿ ತೆರಳಿ ಕುಮಾರಸ್ವಾಮಿ ಅವರ ಶಿಫಾರಸ್ಸು ಪಡೆದು ಅನುದಾನ ಬಿಡುಗಡೆಗೆ ಮುಂದಾಗುವುದಾಗಿ ಹೇಳಿದರು.
ಕಳೆದ ಎರಡು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದ ನಗರಸಭೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಿನ್ನಡೆಯನ್ನು ಅನುಭವಿಸಿದೆ. ಇದೀಗ ಅಧಿಕಾರ ವಹಿಸಿಕೊಂಡಿರುವ ಪೌರಾಯುಕ್ತರು ಅಭಿವೃದ್ಧಿಯ ಚಿಂತನೆಯೊಂದಿಗೆ ಉತ್ಸಾಹದಿಂದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ. ಆದರೆ ಯೋಜನೆಗಳಿಗೆ ಅಗತ್ಯವಿರುವಷ್ಟು ಅನುದಾನ ತರುವಲ್ಲಿ ಶಾಸಕರುಗಳು ವಿಫಲರಾಗಿದ್ದಾರೆ ಎಂದು ಗಣೇಶ್ ಟೀಕಿಸಿದರು.
ನಗರದ ಹಲವು ವಾರ್ಡ್‍ಗಳಲ್ಲಿ ರಸ್ತೆ, ಚರಂಡಿ ಮತ್ತು ತಡೆಗೋಡೆ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ. ಇನ್ನು ನಾಲ್ಕೈದು ತಿಂಗಳಿನಲ್ಲಿ ಮತ್ತೆ ಮಳೆಗಾಲ ಆರಂಭವಾದರೆ ಯಾವುದೇ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಕ್ಷಣ ಶಾಸಕರುಗಳು ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಅವರು ಒತ್ತಾಯಿಸಿದರು.
::: ಪೌರಾಯುಕ್ತರ ನಗರ ಸಂಚಾರ :::
ನಗರದಲ್ಲಿ ಅಪೂರ್ಣಗೊಂಡಿರುವ ಮತ್ತು ನಡೆಯಬೇಕಾಗಿರುವ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಪ್ರಮುಖರು ಮನವಿ ಮಾಡಿದ ಹಿನ್ನೆಲೆ ಪೌರಾಯುಕ್ತ ರಾಮದಾಸ್ ಅವರು ನಗರದ ಗಣಪತಿಬೀದಿ, ಮಲ್ಲಿಕಾರ್ಜುನ ನಗರ, ಗೌಳಿಬೀದಿ, ಸ್ಟೋನ್‍ಹಿಲ್ ರಸ್ತೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿದರು.
ಕಳೆದ ಎರಡು ವರ್ಷಗಳಿಂದ ನಗರದ ಪ್ರಮುಖ ಬಡಾವಣೆಗಳಲ್ಲಿ ರಸ್ತೆ ಹಾಗೂ ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದೆ ನಿವಾಸಿಗಳು ಪರದಾಡುವಂತಾಗಿದೆ ಎಂದು ಕೆ.ಎಂ.ಗಣೇಶ್ ಗಮನ ಸೆಳೆದರು.
ಚರಂಡಿಗಳಿಲ್ಲದೆ ಮಳೆಯ ನೀರು ರಸ್ತೆಯಲ್ಲೇ ಹರಿದು ಹೋಗುವುದರಿಂದ ಎಲ್ಲಾ ರಸ್ತೆಗಳು ಹದಗೆಟ್ಟಿವೆ. ಮುಂದಿನ ಹದಿನೈದು ದಿನಗಳೊಳಗೆ ಗುಣಮಟ್ಟದ ಕಾಮಗಾರಿ ಆರಂಭಿಸದಿದ್ದಲ್ಲಿ ಜೆಡಿಎಸ್ ವತಿಯಿಂದ ನಗರಸಭೆ ಎದುರು ಅಹೋ ರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪೌರಾಯುಕ್ತ ರಾಮದಾಸ್ ಮಾತನಾಡಿ, ಈಗಾಗಲೇ ಹಲವು ಬಡಾವಣೆಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಕಾರಣಾಂತರಗಳಿಂದ ಕೆಲವು ಭಾಗಗಳಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಶೀಘ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುನೀಲ್, ಎಸ್‍ಸಿ ಘಟಕದ ಅಧ್ಯಕ್ಷ ರವಿಕುಮಾರ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಪ್ರಮುಖರಾದ ಕೆ.ಜಿ.ಮದನ್, ಜಗದೀಶ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.

error: Content is protected !!