ಸೋಮವಾರಪೇಟೆ ತಾಲ್ಲೂಕು ಕಚೇರಿ ನವೀಕರಣ : 1.40 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

02/01/2021

ಸೋಮವಾರಪೇಟೆ ಜ.2 : ಇಲ್ಲಿನ ತಾಲ್ಲೂಕು ಕಚೇರಿ ಕಟ್ಟಡವನ್ನು 1.40 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗುತ್ತಿದ್ದು, ಕಾಮಗಾರಿಗೆ ಶನಿವಾರ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ತಾಲ್ಲೂಕು ಕೇಂದ್ರದಲ್ಲಿರುವ ತಾಲ್ಲೂಕು (ಮಿನಿವಿಧಾನಸೌಧ) ಕಚೇರಿಯ ಕಟ್ಟಡ ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದ್ದು, ಮಳೆ ಹಾನಿ ಪರಿಹಾರ ನಿಧಿಯಲ್ಲಿ ರೂ. 1.40 ಕೋಟಿ ಹಣ ನೀಡಲಾಗಿದೆ. ಕಟ್ಟಡದಲ್ಲಿ ಗೋಡೆ, ನೆಲ ದುರಸ್ತಿ ಮಾಡುವುದರೊಂದಿಗೆ, ಮೇಲೆ ಮತ್ತೊಂದು ಅಂತಸ್ತು ನಿರ್ಮಿಸಲಾಗುವುದು. ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡಬೇಕಿದ್ದು, ಇದರ ಬಗ್ಗೆ ತಹಶೀಲ್ದಾರರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್ ಮತ್ತು ಸದಸ್ಯರು, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಜಯಲಕ್ಷ್ಮೀ, ತಹಶೀಲ್ದಾರ್ ಗೋವಿಂದರಾಜು, ಲೋಕೋಪಯೋಗಿ ಕಚೇರಿಯ ಎಇಇ ಮೋಹನ್‍ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.