ಕುಶಾಲನಗರದಲ್ಲಿ ಪಂಪಾ ಬೆಳಕು ಪೂಜೋತ್ಸವ

ಮಡಿಕೇರಿ ಜ.3 : ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 26ನೇ ವರ್ಷದ ಪಂಪಾ ಬೆಳಕು ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಕಲಾತ್ಮಕ ರಂಗೋಲಿಯ ಚಿತ್ತಾರ, ಭಕ್ತಾದಿಗಳು ಬೆಳಗಿಸಿದ ಮಣ್ಣಿನ ಹಣತೆಗಳು ಪೂಜೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು.
ದೇವಾಲಯದಲ್ಲಿ ಪಡಿಪೂಜೆ, ಸಾಂಪ್ರದಾಯಿಕ ವಿಧಿಗಳ ನಂತರ ಸಮೀಪದ ಕಾವೇರಿ ನದಿಯಲ್ಲಿ ಅಯ್ಯಪ್ಪಸ್ವಾಮಿ ಪ್ರತಿಮೆಗೆ ತೀರ್ಥಸ್ನಾನ ನಂತರ ಪಂಪಾದೀಪವನ್ನು ನದಿಯಲ್ಲಿ ತೇಲಿಬಿಡಲಾಯಿತು.
ಈ ಸಂದರ್ಭ ಮಾತನಾಡಿದ ತಂಡದ ಪ್ರಮುಖರಾದ ವಿ.ಎಸ್.ಆನಂದಕುಮಾರ್, ಕಳೆದ ಮೂರು ದಶಕಗಳಿಂದ ಪಂಪಾ ದೀಪೋತ್ಸವ ಕಾರ್ಯಕ್ರಮ ನಡೆದುಕೊಂಡು ಬರುತ್ತಿದ್ದು ಈ ಬಾರಿ ಕೊರೋನ ಹಿನ್ನಲೆಯಲ್ಲಿ ಸಾಂಪ್ರದಾಯಿಕ ವಿಧಿಗಳನ್ನು ಸರಳವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.
ಅಯ್ಯಪ್ಪಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ಪ್ರಮುಖರಾದ ಕೆ.ಆರ್.ಶಿವಾನಂದ, ಡಿ.ಆರ್.ಸೋಮಶೇಖರ್, ಮಣಿ, ತಂಡದ ಸದಸ್ಯರಾದ ಚಂದ್ರು, ರಾಜೇಶ್, ರಾಕಿ, ನರೇಂದ್ರ ಮತ್ತಿತರರು ಹಾಜರಿದ್ದರು.