ಎಸ್‍ಟಿ ಜನಾಂಗ ಸಮಾಜದ ಮುಖ್ಯ ವಾಹಿನಿಗೆ ಬರಬೇಕು : ಶಾಸಕ ಅಪ್ಪಚ್ಚುರಂಜನ್

03/01/2021

ಮಡಿಕೇರಿ ಜ.3 : ಕೊಡಗು ಜಿಲ್ಲಾ ಬಿಜೆಪಿ ಎಸ್‍ಟಿ ಮೋರ್ಚಾದ ಪದಾಧಿಕಾರಿಗಳ ಸಭೆ ಕುಶಾಲನಗರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಅರಣ್ಯ ಮತ್ತು ಕಾಡುಪ್ರಾಣಿಗಳ ನಾಡಿಮಿಡಿತವನ್ನು ಅರಿತಿರುವ ಬುದ್ಧಿವಂತ ಜನಾಂಗ ಎಸ್‍ಟಿಯಾಗಿದ್ದು, ದುಶ್ಚಟಗಳಿಗೆ ದಾಸರಾಗದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಅಲ್ಲದೆ ಜನಾಂಗದ ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ರಾಜಕೀಯವಾಗಿಯೂ ಗುರುತಿಸಿಕೊಂಡಿರುವ ಎಸ್‍ಟಿ ಜನರು ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರುಗಳನ್ನು ಅಭಿನಂದಿಸುವ ಕಾರ್ಯವನ್ನು ಜನಾಂಗದ ಮುಖಂಡರು ಮಾಡುವ ಮೂಲಕ ನಾಯಕತ್ವದ ಗುಣಕ್ಕೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಇಡೀ ದೇಶ ಕಾಂಗ್ರೆಸ್ ಮುಕ್ತವಾಗುತ್ತಿದ್ದು, ಎಲ್ಲಾ ಜನಾಂಗದ ಮಂದಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಬಿಜೆಪಿ ಪ್ರತಿಯೊಂದು ಘಟಕಗಳು ತಳಮಟ್ಟದಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ ಎಂದರು.
ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷ ಮಿಟ್ಟು ರಂಜಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬರುವ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು.
ಎಸ್‍ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ನಾಯಕ್, ಮಂಜುನಾಥ್ ಓಲೇಕಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಜಿ.ಪಂ ಸದಸ್ಯೆ ಕೆ.ಆರ್.ಮಂಜುಳಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಬಿ.ಕೆ.ಮೋಹನ್ ಮತ್ತಿತರರು ಹಾಜರಿದ್ದರು.