ಮನೆಹಳ್ಳಿ ಮಠದಲ್ಲಿ ಪೂಜೋತ್ಸವ : ಆಧ್ಯಾತ್ಮದ ಆಚರಣೆಗಳಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ : ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯ

03/01/2021

ಮಡಿಕೇರಿ ಜ.3 : ಆಧ್ಯಾತ್ಮದ ಆಚರಣೆಗಳಿಂದ ಮಾತ್ರ ನಮ್ಮ ದೇಶದ ಸಂಸ್ಕೃತಿ ಉಳಿಯಲು ಸಾಧ್ಯವೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರಪೇಟೆ ಸಮೀಪದ ಮನೆಹಳ್ಳಿ ಗ್ರಾಮದಲ್ಲಿರುವ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ತಿಕ ಪೂಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ದೇಶದ ಪುರಾತನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಠ ಮಾನ್ಯಗಳಿಂದ, ಗುರುಗಳಿಂದ ಮಾತ್ರ ಸಾಧ್ಯವೆಂದರು.
ಸಮಾಜದ ಅಭಿವೃದ್ಧಿಗೆ ಪೂರಕವಾದ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕೆಂದರು.
ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರಿ. ತ್ರಿನೇತ್ರ ಮಹಾಂತ ಸ್ವಾಮೀಜಿ ಮಾತನಾಡಿ ಇಂದು ಮಠ ಮಾನ್ಯಗಳು ಈ ದೇಶಕ್ಕೆ, ಸಮಾಜಕ್ಕೆ ತನ್ನದೇ ಆದ ಗಮನಾರ್ಹ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅಕ್ಷರ ದಾಸೋಹದೊಂದಿಗೆ ಶೈಕ್ಷಣಿಕ ಪ್ರಗತಿ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಇಂದಿನ ಜೀವನ ಕ್ರಮ ಜಂಜಾಟ ಮತ್ತು ಅಶಾಂತಿಯಿಂದ ಕೂಡಿದ್ದು, ಆಧ್ಯಾತ್ಮಿಕತೆಯಿಂದ ಮಾತ್ರ ಮಾನಸಿಕ ನೆಮ್ಮದಿ ಕಾಣಲು ಸಾಧ್ಯವೆಂದರು.
ಇದೇ ಸಂದರ್ಭ ಮನೆಹಳ್ಳಿ ಮಠದ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಅರಮೇರಿಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಶಿಡಿಗಳಲೇ ಮಠಾಧೀಶ ಇಮ್ಮಡಿ ಶಿವಲಿಂಗ ಸ್ವಾಮೀಜಿ, ತೊರೆನೂರು ಮಠಾಧೀಶ ಮಲ್ಲೇಶ ಸ್ವಾಮೀಜಿ, ದಿಂಡಗಾಡು ಮಠಾಧೀಶ ಅಪ್ಪಾಜಿ ಸ್ವಾಮೀಜಿ, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಕಾರ್ತಿಕ ದೀಪೋತ್ಸವದ ಅಂಗವಾಗಿ ಭಕ್ತರು ಸಹಸ್ರಾರು ದೀಪ ಬೆಳಗಿದರು. ದೇವರ ಉತ್ಸವದ ನಂತರ ಭಕ್ತಾಧಿಗಳಿಗೆ ದಾಸೋಹ ನಡೆಯಿತು.