ಕೊಡಗಿನ ಗಡಿಯಲ್ಲಿ ಮದುವೆ ದಿಬ್ಬಣದ ಬಸ್ ಪಲ್ಟಿ : 7 ಸಾವು

03/01/2021

ಮಡಿಕೇರಿ ಜ.3 : ಮದುವೆ ದಿಬ್ಬಣವನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಮಕ್ಕಳ ಸಹಿತ 7 ಮಂದಿ ಸಾವಿಗೀಡಾಗಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಕೊಡಗಿನ ಗಡಿಭಾಗ ಕರಿಕೆ ಬಳಿ ಭಾನುವಾರ ಸಂಭವಿಸಿದೆ.
ಮೃತರನ್ನು ರಾಜೇಶ್, ರವಿಚಂದ್ರ, ಆದರ್ಶ್, ಶ್ರೇಯಸ್, ಸುಮತಿ, ಶಶಿ ಹಾಗೂ ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ಕರಿಕೆ ಗ್ರಾ.ಪಂ ನಲ್ಲಿ ವಾಟರ್‍ಮ್ಯಾನ್ ಆಗಿರುವ ಚೆತ್ತುಕಾಯದ ಪ್ರಶಾಂತ್ ಎಂಬುವವರ ಮದುವೆ ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಯುವತಿಯೊಂದಿಗೆ ನಿಶ್ಚಯವಾಗಿತ್ತು. ಸುಳ್ಯದ ಆಲೆಟ್ಟಿ ಮೂಲಕ ಕೇರಳದ ಪಾಣತ್ತೂರಿಗಾಗಿ ಕರಿಕೆಗೆ ವಧುವಿನ ದಿಬ್ಬಣ ಆಗಮಿಸಬೇಕಿತ್ತು.
ವಧುವಿನ ಊರಾದ ಈಶ್ವರ ಮಂಗಲದಿಂದ ವಧು ಮತ್ತು ಕೆಲವು ಮಂದಿ ಟೆಂಪೋ ಟ್ರಾವೆಲರ್‍ನಲ್ಲಿ ಪ್ರಯಾಣಿಸುತ್ತಿದ್ದರೆ, ಮಕ್ಕಳು ಸೇರಿದಂತೆ ಸುಮಾರು 60 ಮಂದಿ ಹಿಂದಿನಿಂದ ಕೆಎ19-ಎಎ1539ರ ಖಾಸಗಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರೆಂದು ಹೇಳಲಾಗಿದೆ.
ಸುಳ್ಯದಿಂದ ಕಲ್ಲಪ್ಪಳ್ಳಿ-ಪಾಣತ್ತೂರು ಮಾರ್ಗದ ಮಧ್ಯೆ ಪೆರಿಯಾರಂ ಎಂಬಲ್ಲಿನ ಕಡಿದಾದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮನೆಯೊಂದರ ಮೇಲೆ ಉರುಳಿ ಬಿದ್ದಿದ್ದು, 7 ಮಂದಿ ಸಾವಿಗೀಡಾಗಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕಾಂಞಂಗಾಡ್ ಮತ್ತು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಯ ತನಿಖೆಗೆ ಕೇರಳ ರಾಜ್ಯದ ಸಾರಿಗೆ ಮಂತ್ರಿ ಆದೇಶಿಸಿದ್ದಾರೆ.