ಶಿವರಾಜ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿಗೆ ‘ದಾದಾಸಾಹೇಬ್ ಫಾಲ್ಕೆ ಸೌತ್ 2020’ ಪ್ರಶಸ್ತಿ

January 4, 2021

2020ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ. ಸ್ಯಾಂಡಲ್ ವುಡ್ ನ ಇಬ್ಬರು ಸ್ಟಾರ್ ನಟರು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಈ ಪ್ರಶಸ್ತಿ ದೊರೆತಿದೆ.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಚಲನಚಿತ್ರೋದ್ಯಮಗಳ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ನಡೆಯುವ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಹೊಸ ವರ್ಷದ ದಿನ ಅನೌನ್ಸ್ ಆಗಿದೆ. ದಕ್ಷಿಣ ಭಾರತದ ಖ್ಯಾತ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಜಿತ್ ಕುಮಾರ್, ಮೋಹನ್ ಲಾಲ್ ಮತ್ತು ನಾಗಾರ್ಜುನ ಅಕ್ಕಿನೇನಿ ಅವರಿಗೆ 2020ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಸೌತ್ ಬಹುಮುಖ ನಟರು ಪ್ರಶಸ್ತಿ ದೊರೆತಿದೆ.

ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ರಕ್ಷಿತ್ ಶೆಟ್ಟಿ ಪಾಲಾಗಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಅಭಿನಯಕ್ಕೆ ಈ ಪ್ರಶಸ್ತಿ ದೊರೆತಿದೆ. ಇನ್ನು ನಟಿ ತಾನ್ಯಾ ಹೋಪ್ ಅವರಿಗೆ ಯಜಮಾನ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಸಿನಿಮಾ ಮೂಕಜ್ಜಿಯ ಕನಸುಗಳು ಸಿನಿಮಾ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಪಡೆದಿಕೊಂಡಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ವಿ ಹರಿಕೃಷ್ಣ ಪಾಲಾಗಿದೆ.

ಇನ್ನು ತಮಿಳು ಚಿತ್ರರಂಗದ ಅತ್ಯುತ್ತಮ ಬಹುಮುಖ ನಟ ಪ್ರಶಸ್ತಿಗೆ ಅಜಿತ್ ಕುಮಾರ್ ಭಾಜನರಾಗಿದ್ದಾರೆ. ಅತ್ಯುತ್ತಮ ನಟ ಧನುಷ್ ಪಾಲಾದರೆ ಅತ್ಯುತ್ತಮ ನಟಿ ಪ್ರಶಸ್ತಿ ಜ್ಯೋತಿಕಾಗೆ ದೊರೆತಿದೆ. ಅತ್ಯುತ್ತಮ ತೆಲುಗು ನಟ ಪ್ರಶಸ್ತಿ ನವೀನ್ ಪಾಲಿಶೆಟ್ಟಿಗೆ ದೊರೆತಿದೆ. ಅತ್ಯುತ್ತಮ ನಟಿ ಪ್ರಶಸ್ತಿ ರಶ್ಮಿಕಾ ಮಂದಣ್ಣ ಪಾಲಾಗಿದೆ. ಅತ್ಯುತ್ತಮ ಸಿನಿಮಾ ಜೆರ್ಸಿಗೆ ದೊರೆತಿದೆ.

ಇನ್ನು ಅತ್ಯುತ್ತಮ ಮಲಯಾಳಂ ನಟ ಸೂರಜ್ ವೆಂಜರಮೂಡು ಅವರಿಗೆ ದೊರೆತಿದೆ. ಅತ್ಯುತ್ತಮ ನಟಿ ಪಾರ್ವತಿ ತಿರುವೊತ್ತು ಪಾಲಾಗಿದೆ. ಸದ್ಯ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ ವಾಗಿದೆ. ಯಾವಾಗ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಕಳೆದ ಬಾರಿ ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಾಕಿಂಗ್ ಸ್ಟಾರ್ ಯಶ್ ಪಡೆದುಕೊಂಡಿದ್ದರು.

error: Content is protected !!