ಉಚ್ಚಾಟಿಸುವ ಅಧಿಕಾರ ಸ್ಥಾನೀಯ ಸಮಿತಿಗಿಲ್ಲ : ಸರಸು ಪೆಮ್ಮಯ್ಯ ಅಸಮಾಧಾನ

January 4, 2021

ಮಡಿಕೇರಿ ಜ.4 : ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹೊರಿಸಿ ತಮ್ಮನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದು, ಮಡಿಕೇರಿ ತಾಲ್ಲೂಕು ಮಂಡಲದ ಉಪಾಧ್ಯಕ್ಷಳಾಗಿರುವ ನನ್ನನ್ನು ಉಚ್ಚಾಟಿಸುವ ಅಧಿಕಾರ ಬಲ್ಲಮಾವಟಿ ಬಿಜೆಪಿ ಸ್ಥಾನೀಯ ಸಮಿತಿಗಿಲ್ಲವೆಂದು ಬಲ್ಲಮಾವಟಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾ.ಪಂ ಅಧ್ಯಕ್ಷಳಾಗಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದವರು ಮತ್ತು ನನ್ನ ಜನಪರ ಕಾಳಜಿಯ ಸಮಾಜ ಸೇವೆಯನ್ನು ಅರಗಿಸಿಕೊಳ್ಳಲಾಗದವರು ಉಚ್ಚಾಟನೆಯ ಕುರಿತು ಆಧಾರ ರಹಿತವಾಗಿ ಚರ್ಚಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1992 ರಿಂದ ಬಿಜೆಪಿಯ ಹೋಬಳಿ ಮಟ್ಟ, ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ವರೆಗೆ ಪ್ರಾಮಾಣಿಕ ಕಾರ್ಯಕರ್ತಳಾಗಿ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. ಗ್ರಾ.ಪಂ ಅಧ್ಯಕ್ಷಳಾಗಿ ಪಂಚಾಯಿತಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಯನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ಸಮಾಜ ಸೇವಕಿಯಾಗಿ ನೂರಾರು ಮಹಿಳೆಯರಿಗೆ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಪಿಂಚಣಿ, ಬಿಪಿಲ್ ಪಡಿತರ ಚೀಟಿ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ಅಲ್ಲದೆ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಗಳನ್ನು ಮಾಡಿಸಿದ್ದೇನೆ. ಗ್ರಾಮದ ಜನರನ್ನು ಒಗ್ಗೂಡಿಸುವ ಕಾರ್ಯದೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಶಾಸಕ ಕೆ.ಜಿ.ಬೋಪಯ್ಯ ಅವರ ಪರ ವಿರಾಜಪೇಟೆ ತಾಲ್ಲೂಕಿನಾದ್ಯಂತ ಮತಯಾಚನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದೇನೆ.
ನಾನು ಅಧ್ಯಕ್ಷಳಾಗಿದ್ದಾಗ 2018 ರಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸಾಧನೆಯಲ್ಲಿ ಬಲ್ಲಮಾವಟಿ ಗ್ರಾ.ಪಂ ಪ್ರಥಮ ಸ್ಥಾನ ಗಳಿಸಿದೆ. ಅಪ್ಪಚ್ಚಿರ ಕುಟುಂಬಸ್ಥರ ಮನೆಗೆ 2.5 ಲಕ್ಷದ ಕಾಂಕ್ರಿಟ್ ರಸ್ತೆ, ದೊಡ್ಡಪುಲಿಕೋಟ್ ನಲ್ಲಿ 8 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ, ಕರವಂಡ ಸುರೇಶ ಹಾಗೂ ರವಿ ಕುಟುಂಬಸ್ಥರ ಮನೆಗೆ 1.5 ಲಕ್ಷ ರೂ.ವೆಚ್ಚದ ಕಾಂಕ್ರಿಟ್ ರಸ್ತೆ, ಪೆಬ್ಬಾಟಿರ ಮನೆ ರಸ್ತೆಗೆ ರೂ.75 ಸಾವಿರ, ಮುಕ್ಕಾಟಿರ ಮನೆ ರಸ್ತೆಗೆ ರೂ.75 ಸಾವಿರ, ಮತ್ತು ಐನ್‍ಮನೆಗೆ ರೂ.50 ಸಾವಿರ ಖರ್ಚು ಮಾಡಲಾಗಿದೆ. ಮುಕ್ಕಾಟಿರ ಮನೆ ಭಾಗಕ್ಕೆ 80 ಸಾವಿರ ರೂ.ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್, ದೊಡ್ಡಪುಲಿಕೋಟ್ ಗ್ರಾಮಕ್ಕೆ ನೀರಿನ ಪೈಪ್ ಲೈನ್ ಅಳವಡಿಕೆ, ರೂ.30 ಸಾವಿರ ವೆಚ್ಚದಲ್ಲಿ ಹೊಳೆಗೆ ಕಟ್ಟೆ ನಿರ್ಮಿಸಲಾಗಿದೆ. ಕೋಟೆರ ಕುಟುಂಬಸ್ಥರ ಮನೆಗೆ ಕಾಂಕ್ರೀಟ್ ರಸ್ತೆ, ಕರವಂಡ ಪೆÇವಣ್ಣ ಅವರ ಮನೆಗೆ 50 ಸಾವಿರ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ, ರೂ.1.75 ಲಕ್ಷ ರೂ.50 ಸಾವಿರದಲ್ಲಿ ಕಾಂಕ್ರಿಟ್ ರಸ್ತೆ, ಕೋಟೆ ಶ್ರೀಭಗವತಿ ದೇವಸ್ಥಾನದ ಎದುರಿನಲ್ಲಿ 65 ಸಾವಿರ ರೂ.ವೆಚ್ಚದಲ್ಲಿ ಮೆಟ್ಟಲುಗಳ ನಿರ್ಮಾಣ, ರೂ.30 ಸಾವಿರದಲ್ಲಿ ಶೌಚಾಲಯದ ವ್ಯವಸ್ಥೆ, ಬಲ್ಲಮಾವಟಿ ಮಹಿಳಾ ಸಮಾಜದಲ್ಲಿ 60 ಸಾವಿರ ರೂ.ಗಳಲ್ಲಿ ಶೌಚಾಲಯ ನಿರ್ಮಾಣ, ಬಲ್ಲಮಾವಟಿ ಪಂಚಾಯತ್ ಬಳಿ 1.5 ಲಕ್ಷ ರೂ.ಗಳಲ್ಲಿ ಬಸ್ ತಂಗುದಾಣ, ದೊಡ್ಡಪುಲಿಕೋಟ್ ಶಾಲೆ ಮತ್ತು ಅಂಗನವಾಡಿಗೆ 32 ಸಾವಿರ ರೂ.ಗಳಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆ, ಸೋಲಾರ್ ದೀಪ ಸೇರಿದಂತೆ ಹಲವಾರು ರಸ್ತೆ, ತೆರದ ಬಾವಿ, ಮೋರಿ, ಬಸ್ ತಂಗುದಾಣ ದುರಸ್ತಿ ಕಾರ್ಯ ನಡೆಸಲಾಗಿದೆ. ಸುಮಾರು 100 ಕ್ಕೂ ಹೆಚ್ಚು ಉಜ್ವಲ ಗ್ಯಾಸ್, ಜೇನು ಪೆಟ್ಟಿಗೆ ವಿತರಣೆ, ಮನೆ ನಿರ್ಮಾಣ ಕಾರ್ಯಗಳನ್ನು ಪಂಚಾಯತ್ ವತಿಯಿಂದ ಮಾಡಿಕೊಡಲಾಗಿದೆ. ಇದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಸರಸು ಪೆಮ್ಮಯ್ಯ ತಿಳಿಸಿದ್ದಾರೆ.
ಆದರೆ ಯಾವುದೇ ಸ್ಪಷ್ಟ ಕಾರಣಗಳಿಲ್ಲದೆ ತಮ್ಮ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಸ್ಥಾನೀಯ ಸಮಿತಿಯ ಸದಸ್ಯರು ಗ್ರಾಮದಲ್ಲಿ ಜನಪರ ಕಾಳಜಿ ವಹಿಸಿ ಯಾವುದಾದರು ಕಾರ್ಯಗಳನ್ನು ಮಾಡಿದ್ದರೆ ಬಹಿರಂಗಪಡಿಸಲಿ. ಸ್ಥಾನಿಯ ಸಮಿತಿಯಲ್ಲಿರುವ ಮಾಜಿ ಸದಸ್ಯರು ಪಂಚಾಯತ್ ಮೂಲಕ ಮಾಡಿರುವ ಕಾಮಗಾರಿಯ ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷಳಾಗಿ ಅಧಿಕಾರದಲ್ಲಿದ್ದಾಗ ನಾಪೆÇೀಕ್ಲುನ ಪ್ಲಾಂಟರ್ಸ್ ಕ್ಲಬ್ ನಲ್ಲಿ ಪಕ್ಷದ ಪ್ರಮುಖ ಮನುಮುತ್ತಪ್ಪ ಅವರ ಸಮ್ಮುಖದಲ್ಲಿ ಸ್ಥಾನೀಯ ಸಮಿತಿಯ 7-8 ಮಂದಿ ಸಭೆ ನಡೆಸಿ ನನಗೊಂದು ಪರಿಮಿತಿಯನ್ನು ಹಾಕಿದರು. ಪೆರೂರು, ನೆಲಜಿ, ಬಲ್ಲಮಾವಟ್ಟಿ ಗ್ರಾಮದಲ್ಲಿ ಕೆಲಸ ಮಾಡಬಾರದು, ಕೇವಲ ನನ್ನ ವಾರ್ಡ್ ಇರುವ ದೊಡ್ಡಪುಲಿಕೋಟ್‍ನಲ್ಲಿ ಮಾತ್ರ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದರು ಎಂದು ಸರಸು ಆರೋಪಿಸಿದ್ದಾರೆ.
ಪರಿಮಿತಿಯನ್ನು ಹಾಕಿದ್ದರಿಂದ ಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎನ್ನುವ ಬೇಸರ ನನ್ನನ್ನು ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಪಕ್ಷ ನಿಷ್ಠಳಾಗಿದ್ದರೂ ಜಿಲ್ಲಾ ಬಿಜೆಪಿ ಗಮನಕ್ಕೆ ತಾರದೆ ಸ್ಥಾನೀಯ ಸಮಿತಿಯ ಹೆಸರಿನಲ್ಲಿ ಒಂದೆರಡು ಮಂದಿ ಉಚ್ಚಾಟನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಷವಾಗಿ ಬಹಿರಂಗ ಚರ್ಚೆಗೆ ನಾನು ಸಿದ್ಧಳಿದ್ದು, ಆರೋಪ ಮಾಡುವವರು ಎದುರಿಗೆ ಬರಲಿ ಎಂದು ಸರಸು ಸವಾಲು ಹಾಕಿದ್ದಾರೆ. ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಲೂ ತಯಾರಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !!