ಡಿಸಿಸಿ ಬ್ಯಾಂಕ್ ನಿಯಮದ ವಿರುದ್ಧ ಪಿಗ್ಮಿ ಸಂಗ್ರಹಗಾರರ ಪ್ರತಿಭಟನೆ

04/01/2021

ಮಡಿಕೇರಿ ಜ.4 : ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಜಾರಿಗೆ ತಂದಿರುವ ಹೊಸ ನಿಯಮಗಳನ್ನು ವಿರೋಧಿಸಿ ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಗಾರರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು. ಕಠಿಣ ನಿಯಮಗಳನ್ನು ಕೈಬಿಡಬೇಕು ಮತ್ತು ಕಮಿಷನ್ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘದ ಪ್ರಮುಖರು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ನಾಣಯ್ಯ ಮಾತನಾಡಿ, 2018ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿ ವಿಕೋಪದಿಂದ ಪಿಗ್ಮಿ ಸಂಗ್ರಹಗಾರರು ಆರ್ಥಿಕ ಸಮಸ್ಯೆಯನ್ನು ಎದುರಿಸುವಂತಾಗಿತ್ತು. ಅಲ್ಲದೇ ಕೋವಿಡ್‍ನಿಂದಲೂ ಸಂಕಷ್ಟದ ಪರಿಸ್ಥಿತಿ ಎದುರಾಗಿ ಡಿಸಿಸಿ ಆಡಳಿತ ಮಂಡಳಿಯಿಂದ ಯಾವುದೇ ಸಹಕಾರ ದೊರಕದ ಹಿನ್ನೆಲೆ ಪಿಗ್ಮಿ ಸಂಗ್ರಹಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಸಂಘವನ್ನು ರಚಿಸಲಾಯಿತು. ಆದರೆ ಇದನ್ನೇ ನೆಪ ಮಾಡಿಕೊಂಡು ಬ್ಯಾಂಕ್ ಆಡಳಿತ ಮಂಡಳಿ ನನ್ನನ್ನು ಪಿಗ್ಮಿ ಸಂಗ್ರಹಗಾರ ಹುದ್ದೆಯಿಂದ ತೆಗೆದು ಹಾಕಿರುವುದಲ್ಲದೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಂಗ್ರಹಗಾರರಿಗೂ ಕರಾರು ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹೇರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿತ್ಯ ಪಿಗ್ಮಿ ಸಂಗ್ರಹಿಸುವ ಮೂಲಕ ಡಿಸಿಸಿ ಬ್ಯಾಂಕ್‍ನ ಆರ್ಥಿಕ ಅಭ್ಯುದಯಕ್ಕೆ ಸಹಕಾರಿಯಾಗಿರುವ ಪಿಗ್ಮಿ ಸಂಗ್ರಹಗಾರರಿಗೆ ಅಗತ್ಯ ಅನುಕೂಲತೆಗಳನ್ನು ಕಲ್ಪಿಸಿಕೊಡುವÀ ಬದಲು ಆಡಳಿತ ಮಂಡಳಿ ಕೆಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಸೇರಿಕೊಂಡು ಮತ್ತಷ್ಟು ಕಠಿಣ ನಿಯಮಗಳನ್ನು ಹೇರಿಕೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದರು.
ಬ್ಯಾಂಕ್ ಆಡಳಿತ ಮಂಡಳಿಯ ಕಿರುಕುಳದಿಂದ ಇದೀಗ ಉದ್ಯೋಗದ ಅಭದ್ರತೆ ಮತ್ತು ಆರ್ಥಿಕ ಸಮಸ್ಯೆ ಎದುರಾಗಿದ್ದು, ಕುಟುಂಬ ನಡೆಸಲು ಅಸಾಧ್ಯವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಪಿಗ್ಮಿ ಸಂಗ್ರಹಗಾರರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಮತ್ತು ಕಮಿಷನ್ ಹಣವನ್ನು ತಕ್ಷಣ ಪಿಗ್ಮಿ ಸಂಗ್ರಹಗಾರರ ಉಳಿತಾಯ ಖಾತೆಗೆ ವರ್ಗಾವಣೆ ಮಾಡಬೇಕು, ಈ ಮೊದಲಿನಂತೆ ಶೇ.3ರಷ್ಟು ಕಮಿಷನ್ ನೀಡಬೇಕು ಮತ್ತು ಕಮಿಷನ್ ಹಣವನ್ನು ಕಟಾಯಿಸದಂತೆ ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರು ಹಾಗೂ ಬ್ಯಾಂಕ್‍ನ ವ್ಯವಸ್ಥಾಪಕರಿಗೆ ಆದೇಶ ಮಾಡಬೇಕೆಂದು ನಾಣಯ್ಯ ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ವಿಜಯಲಕ್ಷ್ಮಿ, ಪ್ರಮುಖರಾದ ಬಿ.ಬಿ.ಗಿರೀಶ್ ರೈ, ಸಿ.ಎಲ್.ಜಯಂತ್ ಕುಮಾರ್, ಚಂದ್ರಶೇಖರ್, ಸುಮಿತ್ರ, ಮೊಣ್ಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.