ಬಿಳಿಗೇರಿ ಶ್ರೀಅರ್ಧನಾರೀಶ್ವರ ದೇವಾಲಯದಲ್ಲಿ ಜ.6 ರಿಂದ ಅಷ್ಟಬಂಧ ದ್ರವ್ಯಕಲಶೋತ್ಸವ

January 4, 2021

ಮಡಿಕೇರಿ ಜ. 4 : ಬಿಳಿಗೇರಿಯ ಶ್ರೀಅರ್ಧನಾರೀಶ್ವರ ದೇವಾಲಯದಲ್ಲಿ ಜ.6 ರಿಂದ 8ರ ವರೆಗೆ ಅಷ್ಟಬಂಧ ದ್ರವ್ಯಕಲಶೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿಯ ಕಾರ್ಯದರ್ಶಿ ಪರ್ಲಕೋಟಿ ಅಣ್ಣಿ ಮಾಚಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಜ.6 ರಂದು ಸಂಜೆ 5 ಗಂಟೆಗೆ ತಂತ್ರಿಗಳ ಆಗಮನವಾಗಲಿದ್ದು, ನಂತರ ಮಹಾಸಂಕಲ್ಪ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಜರುಗಲಿದೆ.
ಜ.7 ರಂದು ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಬಿಂಭಶುದ್ಧಿ ಕಲಶ ಪೂಜೆ, ಬಿಂಬಶುದ್ಧಿ, ಕಲಶಾಭಿಷೇಕ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಹೋಮ ಕಲಶಾಭಿಷೇಕ ನಡೆಯಲಿದ್ದು, 12.30ಕ್ಕೆ ಮಧ್ಯಾಹ್ನದ ಪೂಜೆ, ಸಂಜೆ 6.30 ರಿಂದ ಕುಂಭೇಶ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ ಹಾಗೂ ಧ್ರವ್ಯಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ ಜರುಗಲಿದೆ ಎಂದರು.
ಜ.8 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, ತತ್ವ ಹೋಮ, ತತ್ವ ಕಲಶ ಪೂಜೆ, ತತ್ವಕಲಶಾಭಿಷೇಕ ಜರುಗಲಿದ್ದು, 9.40 ರಿಂದ 10.24ರ ಕುಂಭಲಗ್ನದಲ್ಲಿ ಶ್ರೀದೇವರಿಗೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ ಧ್ರವ್ಯ ಕಲಶಾಭಿಷೇಕ ಜರುಗಲಿದೆ. 11.30ಕ್ಕೆ ಮಹಾಪೂಜೆ ನಂತರ ಶ್ರೀಭೂತ ಬಲಿ, ಬಲಿ ಉತ್ಸವ, ರಾಜಾಂಗಣ ಪ್ರಾಸಾದ ಮಂತ್ರಾಕ್ಷತೆಯ ಮೂಲಕ ಪೂಜಾವಿಧಿ ವಿಧಾನಗಳು ಸಂಪನ್ನಗೊಳ್ಳಲಿದೆ ಎಂದರು.
ಅಷ್ಟಬಂಧ ದ್ರವ್ಯಕಲಶೋತ್ಸವದ ಪ್ರಯುಕ್ತ ಭಕ್ತಾಧಿಗಳಿಗೆ ಮೂರು ದಿನಗಳ ಕಾಲ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶ್ರೀಅರ್ಧನಾರೀಶ್ವರ ದೇವಾಲಯವು ಮಡಿಕೇರಿ ತಾಲೂಕಿನ ಬಿಳಿಗೇರಿಯಲ್ಲಿ 2007ರಲ್ಲಿ ರೂ. 80 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿತು. ನಂತರ ಬಿಳಿಗೇರಿ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ 2008ರಲ್ಲಿ ರೂ. 12ಲಕ್ಷ ವೆಚ್ಚದಲ್ಲಿ ವಿಷ್ಣು ಮೂರ್ತಿ ದೇವಾಲಯ ನಿರ್ಮಾಣ ಮಾಡಲಾಯಿತು. ಅಲ್ಲದೇ 2012ರಲ್ಲಿ ರೂ. 70 ಲಕ್ಷ ವೆಚ್ಚದಲ್ಲಿ ಶ್ರೀ ಭಗವತಿ ದೇವಾಲಯ ನಿರ್ಮಾಣ ಮಾಡಲಾಯಿತು. ಇದರ ಯಶಸ್ಸಿನ ಬೆನ್ನಲ್ಲೆ 2012ರಲ್ಲೇ ಶ್ರೀ ಭದ್ರಕಾಳಿ ದೇವಾಲಯವನ್ನು ರೂ. 10ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಯಿತು.
ನಂತರ 2017ರಲ್ಲಿ ರೂ. 25 ಲಕ್ಷ ವೆಚ್ಚದಲ್ಲಿ ಶ್ರೀ ಪೊನ್ನಂಗಾಲತಮ್ಮೆ ದೇವಾಲಯ ನಿರ್ಮಿಸಿದ್ದು, ಪ್ರಸ್ತುತ ದಿನಗಳಲ್ಲಿ ಶ್ರೀಅರ್ಧನಾರೀಶ್ವರ ದೇವಾಲಯದಲ್ಲಿ ರೂ. 30ಲಕ್ಷ ವೆಚ್ಚದಲ್ಲಿ ಮುಖಮಂಟಪ ನಿರ್ಮಾಣ ಹಾಗೂ ನೆಲಹಾಸು ಹಾಕುವ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗಿದೆ. ಇದೀಗ ದೇವಾಲಯದಲ್ಲಿ ಅಷ್ಟಬಂಧ ದ್ರವ್ಯಕಲಶೋತ್ಸವ ನಡೆಸುವ ಕಾರ್ಯವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ದೇವಾತ ಕಾರ್ಯಕ್ಕೆ ಹಾಜರಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ದಂಬೆಕೋಡಿ ಎಸ್.ಸುಕುಮಾರ್, ತಕ್ಕರಾದ ಬಿ.ಎ.ಪುರುಷೋತ್ತಮ ರೈ, ಮಂಞÂ್ಞೀರ ಪಿ.ಸಾಬು ತಿಮ್ಮಯ್ಯ, ಸದಸ್ಯರಾದ ಕೋಟೇರ ಕರಿ ಮುದ್ದಪ್ಪ, ದಂಬೆಕೋಡಿ ಪ್ರೇಮ್ ಹಾಗೂ ಮಂಞÂ್ಞೀರ ಉಮೇಶ್ ಅಪ್ಪಣ್ಣ ಉಪಸ್ಥಿತರಿದ್ದರು.

error: Content is protected !!