ಸರ್ವರ ಸಹಕಾರದಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿದೆ : ಪುಲಿಯಂಡ ಜಗದೀಶ್ ತೃಪ್ತಿ

January 4, 2021

ಮಡಿಕೇರಿ ಜ.4 : ನಗರದ ಇತಿಹಾಸ ಪ್ರಸಿದ್ಧ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಸುಮಾರು 26 ವರ್ಷಗಳ ನಂತರ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಪೂರ್ಣಗೊಂಡಿದ್ದು, ಈ ಅಪರೂಪದ ಸೇವೆಯ ಯಶಸ್ಸಿಗೆ ಕಾರಣಕರ್ತರಾದ ಸರ್ವರನ್ನೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳುವುದಾಗಿ ಶ್ರೀಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸುಮಾರು 25 ಲಕ್ಷ ರೂ. ಖರ್ಚಾಗಿದೆ ಎಂದರು. ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್ ಇಲಾಖೆ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಪ್ರತಿಯೊಬ್ಬರು ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಪೇಜಾವರ ಮಠಾಧೀಶರು, ವಿವಿಧ ಮಠಗಳ ಸ್ವಾಮೀಜಿಗಳ ಆಗಮನ ವಿಶೇಷವಾಗಿತ್ತು ಎಂದು ತಿಳಿಸಿದ ಜಗದೀಶ್ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಡಾ.ಸುಮನ್ ಡಿ.ಪನ್ನೇಕರ್ ಅವರ ಆಗಮನವನ್ನು ಕೂಡ ಸ್ಮರಿಸಿಕೊಂಡರು.
ಕೋವಿಡ್ ಮಾರ್ಗಸೂಚಿಯ ಹಿನ್ನೆಲೆ ಧಾರ್ಮಿಕ ಕಾರ್ಯಗಳನ್ನಷ್ಟೇ ನೆರವೇರಿಸಲಾಗಿದ್ದು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲವೆಂದರು.
::: ಈ ಸೇವೆಗಳು ಇರಲ್ಲ :::
ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿರುವುದರಿಂದ ಫೆ.18 ರವರೆಗೆ ದೇವಾಲಯದಲ್ಲಿ ಅಭಿಷೇಕ ಮತ್ತು ತೀರ್ಥಸ್ನಾನ ಇರುವುದಿಲ್ಲವೆಂದು ಜಗದೀಶ್ ಇದೇ ಸಂದರ್ಭ ತಿಳಿಸಿದರು.
ದೇವಾಲಯಕ್ಕೆ ಸಂಬಂಧಿಸಿದ ಅಶ್ವತ್ಥ ಕಟ್ಟೆಯ ನಾಗನಕಟ್ಟೆಯನ್ನು ನವೀಕರಣಗೊಳಿಸಬೇಕೆಂದು ಪ್ರಶ್ನೆಯಿಂದ ತಿಳಿದು ಬಂದಿದ್ದು, ಈ ಕಾರ್ಯಕ್ಕೆ ಫೆ.18 ರ ನಂತರ ಚಾಲನೆ ನೀಡಲಾಗುವುದು. ಸುಮಾರು 60 ರಿಂದ 70 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಈಗಾಗಲೇ ಅಶ್ವತ್ಥ ಕಟ್ಟೆಯನ್ನು 1.90 ಲಕ್ಷ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಟಿ.ಹೆಚ್.ಉದಯಕುಮಾರ್, ಸುನೀಲ್ ಕುಮಾರ್, ಕುರಿಕಡ ಆನಂದ ಮತ್ತಿತರರು ಉಪಸ್ಥಿತರಿದ್ದರು.

error: Content is protected !!