ಕೋಪಟ್ಟಿಯಲ್ಲಿ ಕಾಡಾನೆ ದಾಳಿ : ಅಪಾರ ಬೆಳೆ ನಷ್ಟ
January 4, 2021

ಮಡಿಕೇರಿ ಜ.4 : ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿರುವ ಘಟನೆ ಭಾಗಮಂಡಲದ ಕೋಪಟ್ಟಿ ಗ್ರಾಮದಲ್ಲಿ ನಡೆದಿದೆ.
ಸುಮಾರು 7 ರಿಂದ 9 ಆನೆಗಳು ಗ್ರಾಮದ ತೋಟಗಳಲ್ಲಿ ದಾಂಧಲೆ ನಡೆಸಿದ್ದು, ಕಾಫಿ, ಭತ್ತ, ತೆಂಗು, ಬಾಳೆ ಗಿಡಗಳಿಗೆ ಹಾನಿ ಮಾಡಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದ್ದು, ಬಾಳೆ ಗಿಡಗಳನ್ನು ತಿಂದು ತೇಗಿವೆ. ಕಳೆದ ಒಂದು ತಿಂಗಳಿನಿಂದ ಕಾಡಾನೆಗಳು ಕೋಪಟ್ಟಿ ಭಾಗದಲ್ಲಿ ಉಪಟಳ ನೀಡುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಸೂಕ್ತ ಪರಿಹಾರ ನೀಡುವುದರೊಂದಿಗೆ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ಮುಂದುವರೆದಿದೆ.