ಕಾಡಾನೆ ಸಮಸ್ಯೆ : ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಚಿಂತನೆ

January 5, 2021

ಮಡಿಕೇರಿ ಜ.5 : ಅರಣ್ಯ ಪ್ರದೇಶಗಳಲ್ಲಿರಬೇಕಾದ ಕಾಡಾನೆಗಳು ಆಹಾರವನ್ನರಸಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಸೃಷ್ಟಿಸುತ್ತಿರುವ ಸಂಕಷ್ಟಗಳ ಬಗೆಹರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಸಾವರ್ಜನಿಕ ಹಿತಾಸಕ್ತಿಯ ಮೊಕದ್ದಮೆ ದಾಖಲಿಸಲು ಕರ್ನಾಟಕ ಬೆಳೆಗಾರರ ಒಕ್ಕೂಟ ಚಿಂತನೆ ನಡೆಸಿದ್ದು, ಇದಕ್ಕೆ ಬೆಳೆಗಾರರು ಪೂರ್ಣ ಬೆಂಬಲ ನೀಡುವಂತೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ಮನವಿ ಮಾಡಿದರು.
ಕಾಡಾನೆಗಳ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದರು, ಬೆಳೆಗಾರರು ಇಂದಿಗೂ ಸಮಸ್ಯೆ ಬಗ್ಗೆ ಮೆದು ಧೋರಣೆಯಲ್ಲೆ ಇರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಅವರು, ಕಾಡಾನೆಗಳ ಹಾವಳಿಯಿಂದ ಉಂಟಾದ ಸಂಕಷ್ಟ, ಸಮಸ್ಯೆಗಳ ಬಗ್ಗೆ ಬೆಳೆಗಾರರು ಎಷ್ಟು ಅರ್ಜಿಗಳನ್ನು ಸಂಬಂಧಿಸಿದವರಿಗೆ ನೀಡಿದ್ದಾರೆಂದು ಪ್ರಶ್ನಿಸಿ, ಇನ್ನಾದರು ಬೆಳೆಗಾರರು ಎಚ್ಚೆತ್ತುಕೊಂಡು ಕಾಡಾನೆ ಸೇರಿದಂತೆ ವನ್ಯ ಜೀವಿಗಳ ಹಾವಳಿ ಬಗ್ಗೆ ಆಗಿರುವ ನಷ್ಟದ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಇದು ನಮ್ಮ ಕಾನೂನಿನ ಹೋರಾಟಕ್ಕೆ ಸಹಕಾರಿಯಾಗಲಿದೆಯೆಂದು ತಿಳಿಸಿದರು.
2013 ರಲ್ಲಿ ನ್ಯಾಯಾಲಯವು ಕೃಷಿ ಭೂಮಿಯಲ್ಲಿ ಬೀಡು ಬಿಟ್ಟ ಕಾಡಾನೆಗಳನ್ನು ಹೊರಗಟ್ಟಬೇಕೆಂದು ಸ್ಪಷ್ಟ ನಿರ್ದೇಶನವನ್ನು ನೀಡಿದೆ. ಆದರೆ, ಇಲ್ಲಿಯವರೆಗೆ ಈ ಬಗ್ಗೆ ಸರ್ಕಾರವಾಗಲಿ, ಅರಣ್ಯ ಇಲಾಖೆಯಾಗಲಿ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪಿಐಎಲ್ ಹೂಡಲು ನಿರ್ಧರಿಸಿರುವುದಾಗಿ ತಿಳಿಸಿದರಲ್ಲದೆ, ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಕಾಡಾನೆಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಒಕ್ಕೂಟ ಒತ್ತಡ ಹೇರುತ್ತದೆಂದರು.
::: ಡಿಸಿ ಕಚೇರಿ ಎದುರು ಪ್ರತಿಭಟನೆ :::
ಕಾಡಾನೆ ಹಾವಳಿ ಸೇರಿದಂತೆ ಬೆಳೆಗಾರರ ಸಮಸ್ಯೆ ಬಗೆಹರಿಕೆಗಾಗಿ ಕಾಫಿ ಬೆಳೆಯುವ ಜಿಲ್ಲೆಗಳ ಜಿಲ್ಲಾಧಿಕಾರಿ ಕಛೇರಿ ಮುಂದೆ ಏಕ ಕಾಲಕ್ಕೆ ಪ್ರತಿಭಟನೆ ನಡೆಸಲು ಒಕ್ಕೂಟ ನಿರ್ಧರಿಸಿದೆಯೆಂದು ತಿಳಿಸಿದರು.

error: Content is protected !!