ವಕ್ಫ್ ಬೋರ್ಡ್ ಆಸ್ತಿ ಸಂರಕ್ಷಣೆಗೆ ಒತ್ತು : ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಮಾಹಿತಿ

January 5, 2021

ಮಡಿಕೇರಿ ಜ. 5 : ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿ ಒಂದು ಲಕ್ಷ ಎಕರೆ ವರೆಗೆ ಒತ್ತುವರಿ ಆಗಿರುವ ಬಗ್ಗೆ ಮಾಹಿತಿ ಇದ್ದು, ಈ ಆಸ್ತಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರು ತಿಳಿಸಿದ್ದಾರೆ.
ನಗರದ ಅರಸು ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಠಿಬದ್ಧವಾಗಿದೆ. ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಭ್ರಾತೃತ್ವ, ಸೌಹಾರ್ಧತೆ ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮಾಹಿತಿ ನೀಡಲಾಗುತ್ತದೆ ಎಂದು ಅಬ್ದುಲ್ ಅಜೀಮ್ ಅವರು ನುಡಿದರು.

ಕೊಡಗು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದ್ದು, ಜನರ ಸ್ಪಂದನೆ, ಒಡನಾಟ, ಸಹಕಾರ ಅತ್ಯುತ್ತಮವಾಗಿದೆ ಎಂದು ಅಬ್ದುಲ್ ಅಜೀಮ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾನೂನು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಖಂಡರ ಜೊತೆ ಸಭೆ ನಡೆಸಲಾಗಿದೆ. ಕೊಡ್ಲಿಪೇಟೆ, ಸೋಮವಾರಪೇಟೆ, ನಾಪೋಕ್ಲು ಹೀಗೆ ಜಿಲ್ಲೆಯ ಹಲವು ಭಾಗಗಳಿಂದ ಅಲ್ಪಸಂಖ್ಯಾತರ ಮುಖಂಡರನ್ನು ಆಹ್ವಾನಿಸಿ ಮುಖಂಡರ ಹಲವು ಸಲಹೆ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದರು.
ಸರ್ಕಾರ ಶಾಂತಿ ಸೌಹಾರ್ಧತೆಗೆ ಆದ್ಯತೆ ನೀಡಿದೆ. ಅಲ್ಪಸಂಖ್ಯಾತರ ಪ್ರತಿನಿಧಿಗಳ ಜೊತೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮವಹಿಸಲಾಗಿದೆ. ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸಿ, ಕಾಲ ಮಿತಿಯೊಳಗೆ ಪರಿಹರಿಸಲಾಗುವುದು ಎಂದರು.
ಅಲ್ಪಸಂಖ್ಯಾತರ ರಕ್ಷಣೆ, ಅಭಿವೃದ್ಧಿ, ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಆ ನಿಟ್ಟಿನಲ್ಲಿ ಕೋವಿಡ್-19 ಲಸಿಕೆಯನ್ನು ಪ್ರತಿಯೊಬ್ಬರೂ ಸರ್ಕಾರದ ನಿರ್ದೇಶನದಂತೆ ಪಡೆಯುವಂತಾಗಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅಬ್ದುಲ್ ಅಜೀಮ್ ಅವರು ಮನವಿ ಮಾಡಿದರು.
ದೇಶದಲ್ಲಿ ಕೊರೊನಾ ನಿಯಂತ್ರಿಸಲು ಕೊರೊನಾ ಲಸಿಕೆ ಪಡೆಯಬೇಕು. ಕೋವಿಡ್-19 ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಅಬ್ದುಲ್ ಅಜೀಮ್ ಅವರು ಕೋರಿದರು.
ಸುದ್ದಿಗೋಷ್ಠಿಗೂ ಮೊದಲು ಅಲ್ಪಸಂಖ್ಯಾತರ ಮುಖಂಡರ ಪ್ರತಿನಿಧಿಗಳಿಂದ ಮಾಹಿತಿ ಪಡೆದರು. ಅಲ್ಪಸಂಖ್ಯಾತರ ಮುಖಂಡರಾದ ಜೋಚಿಮ್ ರೋಡ್ರಿಗ್ರಸ್ (Joachim Rodigurce) ಕೆ.ಎ.ಯಾಕೂಬ್, ಕೆ.ಟಿ.ಬೇಬಿ ಮ್ಯಾಥ್ಯೂ, ಜಾಮೀಯ ಮಸೀದಿ ಅಧ್ಯಕ್ಷರು ಇತರರು ಹಲವು ಮಾಹಿತಿ ನೀಡಿದರು.

error: Content is protected !!