ಭಾವಚಿತ್ರವಿರುವ ಮತದಾರರ ಪಟ್ಟಿ ನಿಖರ ಮಾಹಿತಿ ಪಡೆಯಿರಿ : ಮತದಾರರ ಪಟ್ಟಿ ವೀಕ್ಷಕ ಅನ್ಬುಕುಮಾರ್ ಸಲಹೆ

January 5, 2021

ಮಡಿಕೇರಿ ಜ. 5 : ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಮತದಾರರ ಪಟ್ಟಿ ವೀಕ್ಷಕರಾದ ವಿ.ಅನ್ಬುಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಹಲವು ನಿರ್ದೇಶನ ನೀಡಲಾಯಿತು.
ಮತದಾರರ ಪಟ್ಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿರುವವರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ವಿತರಿಸುವುದು. 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆದ್ಯತೆ ನೀಡುವುದು. ಒಂದು ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆಗೆ ಸಲ್ಲಿಸಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು, ಯಾರಾದರೂ ಮರಣ ಹೊಂದಿದ್ದಲ್ಲಿ ಕುಟುಂಬದವರಿಂದ ಮಾಹಿತಿ ಪಡೆದು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು. ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವುದು. ಮತ್ತಿತರ ಬಗ್ಗೆ ತಹಶೀಲ್ದಾರರು ಖುದ್ದು ಸ್ಥಳ ಪರಿಶೀಲಿಸಿ ಮಾಹಿತಿ ಪಡೆಯುವಂತೆ ಮತದಾರರ ಪಟ್ಟಿ ವೀಕ್ಷಕರಾದ ವಿ.ಅನ್ಬುಕುಮಾರ್ ಅವರು ಸೂಚಿಸಿದರು.
ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಇದೇ ಎಂಬುದನ್ನು ಪರಿಶೀಲಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿ ಅವರು ಜಿಲ್ಲೆಯಲ್ಲಿ ಮೇಲ್ವಿಚಾರಣೆ ಮಾಡುವಂತೆ ಅವರು ನಿರ್ದೇಶನ ನೀಡಿದರು.
ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಕಾಲ ಕಾಲಕ್ಕೆ ಮಾಹಿತಿ ನೀಡಬೇಕಿದ್ದು, ನಿಖರ ವರದಿ ಸಲ್ಲಿಸುವಂತೆ ಮತದಾರರ ಪಟ್ಟಿ ವೀಕ್ಷಕರು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗ್ರಾ.ಪಂ.ಚುನಾವಣಾ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು, ಇಂತಹ ಗ್ರಾ.ಪಂ.ವ್ಯಾಪ್ತಿಗಳಲ್ಲಿ ಹೆಚ್ಚಿನ ನಿಗಾವಹಿಸಿ ಮತದಾರರ ಪಟ್ಟಿಯನ್ನು ಸರಿಪಡಿಸುವಂತೆ ಸೂಚಿಸಿದರು.
ಹೆಚ್ಚಿನ ಜನರಿರುವ ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಕಂದೂ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ, ತಹಶೀಲ್ದಾರರಾದ ಗೋವಿಂದರಾಜು(ಸೋಮವಾರಪೇಟೆ), ಮಹೇಶ್(ಮಡಿಕೇರಿ), ಯೋಗಾನಂದ(ವಿರಾಜಪೇಟೆ), ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಶಿರಸ್ತೆದಾರರು ಇತರರು ಇದ್ದರು.

error: Content is protected !!