ಕೊಡಗು ಕ್ವಿಝ್ : ಅಮೂಲ್ಯ ಮಾಹಿತಿಯ ಅಪರೂಪದ ಪುಸ್ತಕ ಈಗ ಲಭ್ಯ

January 6, 2021

ಮಡಿಕೇರಿ ಜ. 6 : “ಕೊಡಗು ಕ್ವಿಝ್” ಇದು ಜಿಲ್ಲೆಯ ಭೌಗೋಳಿಕ, ಚಾರಿತ್ರಿಕ, ಸಾಹಿತ್ಯಕ ಹಾಗೂ ಸಾಮಾಜಿಕ ರಂಗಗಳಲ್ಲಿನ ಪ್ರಮುಖ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಕೃತಿ.
ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರಾಗಿರುವ ಸುಬ್ರಾಯ ಸಂಪಾಜೆ ಈ ಕೃತಿಯ ಸಂಪಾದಕರು. ಪ್ರಶ್ನೋತ್ತರ ರೂಪದಲ್ಲಿರುವ ಸಾವಿರಾರು ಮಾಹಿತಿಗಳು ಈ ಕೃತಿಯಲ್ಲಿವೆ. ಇದರಲ್ಲಿ ಸಮಾಜದ ವಿವಿಧ ರಂಗಗಳಲ್ಲಿನ ಪ್ರಮುಖ ವಿಷಯಗಳನ್ನು ಚುಟುಕಾಗಿ ಕೊಡಲಾಗಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇದರೊಳಗಿನ ಮಾಹಿತಿಗಳೆಲ್ಲವೂ ಮಹತ್ವಪೂರ್ಣವಾದವು.
ಈ ಪುಸ್ತಕದ ಪುಟ ತಿರುವುತ್ತಾ ಹೋದಂತೆ ಕೊಡಗಿನ ಸಾಹಿತ್ಯ ಕ್ಷೇತ್ರ, ಮಾಧ್ಯಮ ರಂಗ, ಧಾರ್ಮಿಕ ಕ್ಷೇತ್ರ, ವಿವಿಧ ಜನಾಂಗಗಳ ವಿವರ, ಪ್ರಸಿದ್ಧ ಸಾಹಿತ್ಯ ಕೃತಿಗಳ ಲೇಖಕರು, ಸಂಘ ಸಂಸ್ಥೆಗಳ ಪ್ರಮುಖರು, ಯೋಧರು, ಕ್ರೀಡಾಪಟುಗಳು, ರಾಜಕಾರಣಿಗಳು, ಉನ್ನತಾಧಿಕಾರಿಗಳು, ಕವಿಗಳು, ಕಲಾವಿದರು, ಸಮಾಜ ಸೇವಕರು ಜನಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು ಹಾಗೂ ಮಡಿಕೇರಿ ಆಕಾಶವಾಣಿ ನಡೆದುಬಂದ ಹಾದಿ ಹೀಗೆ ಅನೇಕ ಸಂಕ್ಷಿಪ್ತ ಮಾಹಿತಿಗಳನ್ನು ಒಳಗೊಂಡಿದೆ.
ಇಷ್ಟಲ್ಲದೆ ಜಿಲ್ಲೆಯ ಮಡಿಕೇರಿ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳ ವರ್ಣ ಚಿತ್ರಗಳನ್ನೂ ಕೊಡಲಾಗಿದೆ. ಹಿರಿಯರು ಕನ್ನಡಕದ ಸಹಾಯವಿಲ್ಲದೇ ಸುಲಭವಾಗಿ ಓದಿ ತಿಳಿಯುವಂತೆ ಅಕ್ಷರಗಳನ್ನು ದೊಡ್ಡ ಗಾತ್ರದಲ್ಲಿ ಮುದ್ರಿಸಲಾಗಿದ್ದು, ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾದ ಶಾರದಾ ನಂಜಪ್ಪ ಅವರ ಮುನ್ನುಡಿ ಇರುವ ಈ ಕೃತಿಯನ್ನು ವಿಟ್ಲದ ಅಭಿರುಚಿ ಪ್ರಕಾಶನ ಹೊರತಂದಿದೆ. 240 ಪುಟಗಳನ್ನೊಳಗೊಂಡಿದ್ದು, 150 ರೂ. ಮುಖ ಬೆಲೆಯುಳ್ಳ ಈ ಕೃತಿಯಲ್ಲಿ 1700ಕ್ಕೂ ಅಧಿಕ ಉಪಯುಕ್ತ ಮಾಹಿತಿಗಳು ಅಡಕಗೊಂಡಿವೆ. ಜಿಲ್ಲೆಯ ವಿವಿಧ ರಂಗಗಳ ಸಂಕ್ಷಿಪ್ತ ಮಾಹಿತಿಗಳನ್ನು ತಿಳಿಯಬಯಸುವವರಿಗೆ ಇದು ಸಂಗ್ರಹಕ್ಕೆ ಯೋಗ್ಯವಾದ ಕೃತಿ ಎನಿಸಲಿದೆ.
ಹೆಚ್ಚಿನ ಮಾಹಿತಿಗೆ ಸುಬ್ರಾಯ ಸಂಪಾಜೆ – 9448647191 ಸಂಪರ್ಕಿಸಬಹುದಾಗಿದೆ.

error: Content is protected !!