ಗಜಗಿರಿಬೆಟ್ಟದಲ್ಲಿ ಇಂಗು ಗುಂಡಿ ನಿರ್ಮಾಣ : ನಷ್ಟ ವಸೂಲಿಗೆ ಆಗ್ರಹ

06/01/2021

ಮಡಿಕೇರಿ ಜ.6 : ತಲಕಾವೇರಿಯ ಗಜಗಿರಿಬೆಟ್ಟದಲ್ಲಿ ಅನಗತ್ಯವಾಗಿ ಇಂಗು ಗುಂಡಿಗಳನ್ನು ನಿರ್ಮಿಸಿ ಅನಾಹುತಕ್ಕೆ ದಾರಿ ಮಾಡಿಕೊಟ್ಟ ಅರಣ್ಯ ಅಧಿಕಾರಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಂಡು ನಷ್ಟ ವಸೂಲಿಗೆ ಮುಂದಾಗಬೇಕೆಂದು ರೈತ ಮಿತ್ರ ಕೂಟದ ಪ್ರಮುಖ ಸೂದನ ಎಸ್.ಈರಪ್ಪ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಅವರು ಬೆಟ್ಟದ ಮೇಲೆ ಅಂತರ್ಜಲ ಮಟ್ಟ ಹೆಚ್ಚಿಸುವ ಪರಿಕಲ್ಪನೆ ಅವೈಜ್ಞಾನಿಕ ಮತ್ತು ಪ್ರಾಕೃತಿಕ ಸಮತೋಲನಕ್ಕೆ ವಿರುದ್ಧವಾಗಿದ್ದು, ಗಜಗಿರಿ ಬೆಟ್ಟ ಕುಸಿತದಿಂದ ಆದ ಕಷ್ಟ, ನಷ್ಟಗಳಿಗೆ ಅರಣ್ಯ ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಅನಾಹುತದಲ್ಲಿ ಅರ್ಚಕ ಕುಟುಂಬ ಮತ್ತು ಸಹಾಯಕ ಅರ್ಚಕರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಸ್ಥಳೀಯ ಗ್ರಾಮಸ್ಥರು ಸಂಕಷ್ಟದ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಮತ್ತು ಪರಿಹಾರ ವಿತರಣೆಗೆ ಸರ್ಕಾರದ ಬೊಕ್ಕಸದಲ್ಲಿರುವ ಸಾರ್ವಜನಕರ ಹಣವನ್ನು ಖರ್ಚು ಮಾಡಲಾಗಿದೆ. ಯಾವುದೇ ತಪ್ಪು ಮಾಡದ ಸಾರ್ವಜನಿಕರ ಹಣವನ್ನು ಈ ರೀತಿ ವ್ಯಯಿಸುವ ಬದಲು ಕಾನೂನಿಗೆ ವಿರುದ್ಧವಾಗಿ ಬೆಟ್ಟದ ಮೇಲೆ ಇಂಗು ಗುಂಡಿಯನ್ನು ನಿರ್ಮಿಸಿ ಅನಾಹುತಕ್ಕೆ ಕಾರಣಕರ್ತರಾದವರಿಂದ ಈ ನಷ್ಟವನ್ನು ಭರಿಸುವುದು ಸೂಕ್ತವೆಂದು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದಾರೆ.
2015-16 ಹಾಗೂ 2016-17ನೇ ಸಾಲಿನಲ್ಲಿ ಇಂಗು ಗುಂಡಿ ನಿರ್ಮಿಸುವುದಕ್ಕಾಗಿ ಅರಣ್ಯ ಇಲಾಖೆ ಸುಮಾರು 7,00,523 ರೂ.ಗಳನ್ನು ಖರ್ಚು ಮಾಡಿರುವ ಬಗ್ಗೆ ಮಾಹಿತಿ ಹಕ್ಕಿನಿಂದ ಮಾಹಿತಿ ಲಭಿಸಿದೆ. ಇದು ಸಾರ್ವಜನಿಕರ ಹಣವಾಗಿದ್ದು, ಈ ಮೊತ್ತವೂ ಸೇರಿದಂತೆ ಇಲ್ಲಿಯವರೆಗೆ ಅನಾಹುತಕ್ಕೆ ಸಂಬಂಧಿಸಿದಂತೆ ಖರ್ಚಾದ ಎಲ್ಲಾ ಹಣವನ್ನು ಸಂಬಂಧಿಸಿದ ಅರಣ್ಯ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕೆಂದು ಸೂದನ ಈರಪ್ಪ ಒತ್ತಾಯಿಸಿದ್ದಾರೆ.
ಬೆಟ್ಟ ಕುಸಿತದ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಈಗಾಗಲೇ ವೈಜ್ಞಾನಿಕ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಅವೈಜ್ಞಾನಿಕ ಕಾಮಗಾರಿ ಹಾಗೂ ಅನಗತ್ಯ ಮಾನವ ಹಸ್ತಕ್ಷೇಪ ಎಂದು ಹೇಳಲಾಗಿದೆ. ಕಾಮಗಾರಿ ಆರಂಭಕ್ಕೆ ಮೊದಲೇ ಸ್ಥಳೀಯ ಮುಖಂಡರು ಎಚ್ಚರಿಕೆ ನೀಡಿ ಅನಾಹುತಕ್ಕೆ ದಾರಿಯಾಗುವ ಮುನ್ಸೂಚನೆ ನೀಡಿದ್ದರೂ ಅರಣ್ಯ ಇಲಾಖೆ ಇದನ್ನು ಪರಿಗಣಿಸಿಲ್ಲ. ಕೆಲವು ಜನಪ್ರತಿನಿಧಿಗಳು ಕೂಡ ಈ ಅಪಾಯಕಾರಿ ಕಾಮಗಾರಿಗೆ ಪೋತ್ಸಾಹ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಇಂಗು ಗುಂಡಿ ನಿರ್ಮಾಣ, ಗಜಗಿರಿ ಬೆಟ್ಟ ಕುಸಿತ, ಖರ್ಚಾದ ಹಣ, ಕಾಣದ ಕೈಗಳ ಕೈವಾಡ ಮತ್ತು ಅಧಿಕಾರಿಗಳ ಲೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಕೈಗೊಂಡು ತಪ್ಪಿತಸ್ತರಿಗೆ ಕಾನೂನಿನ ಚೌಕಟ್ಟಿನಡಿ ಶಿಕ್ಷೆ ವಿಧಿಸಲು ಶಿಫಾರಸ್ಸು ಮಾಡಬೇಕು ಎಂದು ಸೂದನ ಈರಪ್ಪ ಒತ್ತಾಯಿಸಿದ್ದಾರೆ.
ಕೆಲವು ಡೋಂಗಿ ಪರಿಸರವಾದಿಗಳು ದಕ್ಷ ಅಧಿಕಾರಿಗಳನ್ನು ಬೆದರಿಸುತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ಆರೋಪಿಸಿರುವ ಅವರು, ಕಾನೂನು ಉಲ್ಲಂಘಿಸುವ ಪರಿಸರವಾದಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.