ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಅಧಿಕ ಅನುದಾನ ಮೀಸಲು : ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪ್ರತಾಪ್ ಮೆಚ್ಚುಗೆ

January 6, 2021

ಮಡಿಕೇರಿ ಜ.6 : ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳ ಕಲ್ಯಾಣ ಕಾರ್ಯಗಳಿಗೆ ಒತ್ತು ನೀಡಿ ಕಾಲೇಜು ವಿದ್ಯಾಭ್ಯಾಸಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 59,048 ಕೋಟಿ ರೂ. ಗಳ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದು, ಕೇಂದ್ರ ಸರ್ಕಾರದ ಈ ನಡೆಯು ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಎಸ್.ಎ.ಪ್ರತಾಪ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಗುರಿ ಸಾಧನೆಗೆ ಸಹಕಾರಿಯಾಗಿದ್ದು, ಈ ಅನುದಾನ ವರ್ಷದಿಂದ ವರ್ಷಕ್ಕೆ ಶೇ.5 ರಷ್ಟು ಹೆಚ್ಚಾಗಲಿದೆ. ಇದರಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ದಲಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆಯೇ ಹೊರತು, ದಲಿತರ ಕಲ್ಯಾಣ ಕಾರ್ಯಗಳಿಗೆ ಯೋಜನೆಗಳನ್ನು ರೂಪಿಸಿಲ್ಲ. ಪರಿಶಿಷ್ಟ ಜಾತಿ, ಪಂಗಡದವರು ಕಾಂಗ್ರೆಸ್‍ನಿಂದ ದೂರವಾಗಿ ಬಿಜೆಪಿಯ ಕಡೆ ಮುಖ ಮಾಡಿದ್ದಾರೆ. ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನ್ನ ಸೋಲಿಗೆ ದಲಿತರು ಮತ ಹಾಕದಿರುವುದೇ ಕಾರಣವೆಂದು ಹೇಳಿಕೊಂಡಿದ್ದಾರೆ. ದಲಿತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬು, ಆದರೆ ಕಾಂಗ್ರೆಸ್ ಪಕ್ಷ ದಲಿತರ ಬೆನ್ನು ಮುರಿಯುತ್ತಿದೆ ಎಂದು ಪ್ರತಾಪ್ ಆರೋಪಿಸಿದರು.
ಭಾರತ ಗಣರಾಜ್ಯವಾದ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ವಿಧಾನಸಭೆಯ ಅಧಿವೇಶನದಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಇದರಿಂದ ಇಡೀ ರಾಜ್ಯಕ್ಕೆ ಸಂವಿಧಾನದ ಮಹತ್ವ ಮತ್ತು ಅನಿವಾರ್ಯತೆಯ ಅರಿವಾಗಿದೆ. ಈ ರೀತಿಯ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಎಂದೂ ಮಾಡಿಲ್ಲವೆಂದು ಟೀಕಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ದಲಿತರ ಮತಗಳಿಸಿ ಅಧಿಕಾರಕ್ಕೆ ಬರುವ ಕಾಂಗ್ರೆಸ್ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಕಾಳಜಿ ತೋರಿಲ್ಲ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು ಮುಖ್ಯಮಂತ್ರಿಯಾಗಲು ಭಾರತೀಯ ಜನತಾ ಪಕ್ಷ ಸಹಕಾರ ನೀಡಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಬಳಕೆಯ ವಸ್ತುಗಳಾಗಿದ್ದಾರೆಯೇ ಹೊರತು ಈ ಪಕ್ಷದಿಂದ ದುರ್ಬಲರ ಉದ್ಧಾರ ಅಸಾಧ್ಯವೆಂದು ಪ್ರತಾಪ್ ಅಭಿಪ್ರಾಯಪಟ್ಟರು.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರು, ಹಿಂದುಳಿದವರು, ದುರ್ಬಲರು, ರೈತರು ಹಾಗೂ ಕಾರ್ಮಿಕರ ಪರವಾದ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಸೈ ಎನಿಸಿಕೊಂಡಿವೆ. ಆದ್ದರಿಂದ ದಲಿತರು ಸೇರಿದಂತೆ ಎಲ್ಲಾ ವರ್ಗದ ಮಂದಿ ಬಿಜೆಪಿಯೊಂದಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದ್ದಾರೆ.

error: Content is protected !!