ಫಾರಂ ನಂ.3 ಸಕಾಲದಲ್ಲಿ ಸಿಗದಿದ್ದರೆ ನ್ಯಾಯಾಲಯದ ಮೊರೆ : ಕೊಡಗು ಜೆಡಿಎಸ್ ಎಚ್ಚರಿಕೆ

06/01/2021

ಮಡಿಕೇರಿ ಜ.6 : ಸಾರ್ವಜನಿಕರು ಫಾರಂ ನಂ.3 ನ್ನು ಆನ್ ಲೈನ್ ಮೂಲಕವೇ ಪಡೆಯಲು ಮಡಿಕೇರಿ ನಗರಸಭೆ ಅನುಕೂಲ ಕಲ್ಪಿಸಿಕೊಡಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರ ಫಾರಂ ನಂ.3 ಸಿಗಲಿ ಎನ್ನುವ ಕಾರಣಕ್ಕಾಗಿ ಆನ್‍ಲೈನ್ ಮೂಲಕ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ನಗರಸಭೆಯಲ್ಲಿ ಇದನ್ನು ನೀಡಲು 10 ರಿಂದ 15 ದಿನಗಳವರೆಗೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಚಾರಕಷ್ಟೇ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಸೀಮಿತವಾಗಿದ್ದು, ನಗರಸಭೆಯಲ್ಲಿ ನಿತ್ಯ ಸರ್ವರ್ ಸಮಸ್ಯೆಯ ನೆಪವೊಡ್ಡಿ ಅರ್ಜಿದಾರರನ್ನು ಸತಾಯಿಸಲಾಗುತ್ತಿದೆ. ಫಾರಂ ನಂ.3 ಸಕಾಲದಲ್ಲಿ ಸಿಗದೆ ಅನೇಕರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುವಂತ್ತಾಗಿದೆ. ಕಾನೂನು ಚೌಕಟ್ಟಿನ ಪ್ರಕರಣಗಳಲ್ಲಿ ಜಾಮೀನು ಸಿಗದೆ ಬಂಧಿಗಳಾಗಿರುವ ಪ್ರಸಂಗಗಳೂ ನಡೆದಿದೆ.
ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಯನ್ನು ಪಡೆಯಲು ಅಧಿಕಾರಿಗಳ ಹಿಂದೆ ಅಲೆದಾಡಬೇಕಾದ ದುಸ್ಥಿತಿ ಬಂದೊದಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಪೌರಾಯುಕ್ತರು ಈ ಬಗ್ಗೆ ಪರಿಶೀಲಿಸಬೇಕು. ಸೂಕ್ತ ಸಮಯದಲ್ಲಿ ಆನ್‍ಲೈನ್ ಮೂಲಕವೇ ಫಾರಂ ನಂ.3 ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಗಣೇಶ್ ಒತ್ತಾಯಿಸಿದ್ದಾರೆ.
ನಗರಸಭಾ ಕಚೇರಿಯ ಅವ್ಯವಸ್ಥೆಗಳನ್ನು ತಕ್ಷಣ ಸರಿಪಡಿಸದಿದ್ದಲ್ಲಿ ಫಾರಂ ನಂ.3 ಸೂಕ್ತ ಸಮಯದಲ್ಲಿ ಸಿಗದೆ ಸಂಕಷ್ಟವನ್ನು ಎದುರಿಸುತ್ತಿರುವ ಅರ್ಜಿದಾರರ ಪ್ರಕರಣವನ್ನು ಆಧಾರವಾಗಿರಿಸಿಕೊಂಡು ನ್ಯಾಯಾಲಯದ ಮೆಟ್ಟಿಲೇರುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.