ರಸ್ತೆ ಕಾಮಗಾರಿ ಅಪೂರ್ಣ : ಮಡಿಕೇರಿ ಹಿತರಕ್ಷಣಾ ವೇದಿಕೆ ಅಸಮಾಧಾನ

January 6, 2021

ಮಡಿಕೇರಿ ಜ.6 : ನಗರದ ವಿವಿಧ ಬಡಾವಣೆಗಳ ರಸ್ತೆಗಳು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ, ಅಲ್ಲದೆ ಪಾದಾಚಾರಿಗಳ ಓಡಾಟ ಅಸಾಧ್ಯವಾಗಿದೆ. ಇತ್ತೀಚೆಗೆ ಕೆಲವು ರಸ್ತೆಗಳನ್ನಷ್ಟೇ ಡಾಮರೀಕರಣ ಮಾಡಲಾಗಿದ್ದು, ಬಹುತೇಕ ರಸ್ತೆಗಳ ಕಾಮಗಾರಿ ಅಪೂರ್ಣಗೊಂಡಿದೆ ಎಂದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ನಗರಸಭೆಯ ಪೌರಾಯುಕ್ತ ರಾಮದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದ ವೇದಿಕೆಯ ಪ್ರಮುಖರು ಹಾಗೂ ಬಡಾವಣೆಗಳ ನಿವಾಸಿಗಳು ನಗರದ ಹೊಸ ಬಡಾವಣೆಯ ಸಬ್ ರಿಜಿಸ್ಟರ್ ಕಚೇರಿಯಿಂದ ಜನನಿ ಆಸ್ಪತ್ರೆ, ಹಳೆ ಇಂಡಿಯನ್ ಗ್ಯಾಸ್ ಕಚೇರಿ, ಗೌಳಿ ಬೀದಿ ಹಾಗೂ ಡಾ.ಅನಿಲ್ ಚಂಗಪ್ಪ ಅವರ ಮನೆಗೆ ಹೋಗುವ ರಸ್ತೆಗಳನ್ನು ತಕ್ಷಣ ದುರಸ್ತಿ ಪಡಿಸುವಂತೆ ಒತ್ತಾಯಿಸಿದರು.
ಕಳಪೆ ಕಾಮಗಾರಿ ನಡೆಯದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು. ಒಂದು ವಾರದೊಳಗೆ ಕಾಮಗಾರಿಯನ್ನು ಆರಂಭಿಸದಿದ್ದಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ಮಾತನಾಡಿದ ಪೌರಾಯುಕ್ತರು ಮಡಿಕೇರಿ ನಗರದ ಎಲ್ಲಾ ರಸ್ತೆಗಳ ಕಾಮಗಾರಿ ನಡೆಯುತ್ತಿದ್ದು, ಬಾಕಿ ಉಳಿದಿರುವ ದುರಸ್ತಿ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು.
ವೇದಿಕೆಯ ಅಧ್ಯಕ್ಷ ರವಿಗೌಡ, ಸದಸ್ಯರುಗಳಾದ ಸುರೇಶ್ ಕುಮಾರ್, ಸತೀಶ್ ಪೈ, ಲಿಲ್ಲಿ, ನಾಗೇಶ್, ನಿವಾಸಿಗಳಾದ ಮಂಡಿರ ತಮ್ಮಿ, ಹರೀಶ್ ಮುತ್ತಪ್ಪ, ವಸಂತ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

error: Content is protected !!