ಹೆಚ್. ಎಂ. ನಂದಕುಮಾರ್ ಪ್ರಯತ್ನ: ಮೇಕೇರಿ ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಕೆ ಯಶಸ್ವಿ

January 7, 2021

ಮಡಿಕೇರಿ ಜ. 7 : ಕೊಡಗು ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರ ಅಸಹಕಾರದಿಂದ ಮನನೊಂದು ಮೇಕೇರಿ ವಲಯ ಕಾಂಗ್ರೆಸ್ ಪ್ರಮುಖರು ಸಾಮೂಹಿಕವಾಗಿ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಕೆಪಿಸಿಸಿ ಸಂಯೋಜಕರು ಮತ್ತು ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷ ಹೆಚ್. ಎಂ. ನಂದಕುಮಾರ್ ಅವರ ಮನವಿಯ ಮೇರೆಗೆ ಹಿಂಪಡೆದಿದ್ದಾರೆ.
ಗ್ರಾ.ಪಂ ಚುನಾವಣೆಯಲ್ಲಿ ಹಿರಿಯ ಮುಖಂಡರು ಸಹಕಾರ ನೀಡದೆ ಇದ್ದುದರಿಂದ ಗ್ರಾ.ಪಂ ಸದಸ್ಯರಾದ ಎಂ. ಇ ಹನೀಫ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದು, ವಲಯ ಕಾಂಗ್ರೆಸ್ ಅಧ್ಯಕ್ಷ ಚೆಟ್ಟೋಳಿರ ಪ್ರಕಾಶ್ ಪೂಣಚ್ಚ ಸೇರಿದಂತೆ ವಲಯ ಕಾಂಗ್ರೆಸ್ ಪ್ರಮುಖರು ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರ ವ್ಯಕ್ತಪಡಿಸಿದ್ದರು.

ಇದರ ತೀವ್ರತೆ ಅರಿತ ಹೆಚ್. ಎಂ ನಂದಕುಮಾರ್ ಮಂಗಳವಾರ ಸಂಜೆ ಎಂ. ಯು ಹನೀಫ್ ಅವರ ನಿವಾಸಕ್ಕೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ, ಡಿಸಿಸಿ ಸದಸ್ಯ ಪ್ರಕಾಶ್ ಆಚಾರ್ಯ ಅವರೊಂದಿಗೆ ತೆರಳಿ ಅಸಮಾಧಾನ ಗೊಂಡ ಕಾರ್ಯಕರ್ತರ ಮನವೊಲಿಕೆ ಮಾಡಿ ರಾಜಿನಾಮೆಯನ್ನು ವಾಪಸ್ಸು ಪಡೆಯುವಲ್ಲಿ ಯಶಸ್ವಿಯಾದರು. ಮುಂದಿನ ದಿನಗಳಲ್ಲಿ ಸಮನ್ವಯತೆಯ ಕೊರತೆಯಾಗದಂತೆ ನಿಭಾಯಿಸುವ ಭರವಸೆ ನೀಡಿದರು.

ನಂದಕುಮಾರ್ ಭರವಸೆ ಮೇರೆಗೆ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪೂಣಚ್ಚ, ಗ್ರಾ.ಪಂ ಸದಸ್ಯ ಹನೀಫ್ ಸೇರಿದಂತೆ ವಲಯ ಕಾಂಗ್ರೆಸ್ ಮುಖಂಡರು ಪಕ್ಷದಲ್ಲಿ ಸಕ್ರಿಯವಾಗಿ ಮುಂದುವರಿಯುವುದಾಗಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠ ಗೊಳಿಸುವುದಾಗಿ ತಿಳಿಸಿದರು.

error: Content is protected !!