ಶ್ರೀಕೃಷ್ಣ ಗೋಶಾಲೆಗೆ ಒಣ ಹುಲ್ಲು ನೀಡಲು ಮನವಿ

07/01/2021

ಮಡಿಕೇರಿ ಜ.7 : ಕೊಡಗಿನ ರೈತರು ಭತ್ತದ ಕೊಯ್ಲು ಆದ ನಂತರ ಒಣ ಹುಲ್ಲನ್ನು ಭಾಗಮಂಡಲದ ಚೆಟ್ಟಿಮಾನಿಯ ಶ್ರೀಕೃಷ್ಣ ಗೋಶಾಲೆಯಲ್ಲಿ ಆಶ್ರಯ ಪಡೆದಿರುವ ಅನಾಥ ಗೋವುಗಳಿಗೆ ಆಹಾರದ ರೂಪದಲ್ಲಿ ನೀಡಿ ಸಹಕರಿಸುವಂತೆ ಗೋಶಾಲೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೋವಿಡ್ ಕಾರಣದಿಂದಾಗಿ ಸಮರ್ಪಕವಾಗಿ ದೇಣಿಗೆ ಬಾರದಿರುವುದರಿಂದ ಹಣ ನೀಡಿ ಹುಲ್ಲನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೈತಾಪಿ ವರ್ಗದ ಮಂದಿ ಹುಲ್ಲನ್ನು ಗದ್ದೆಯಲ್ಲೇ ಬಿಡುವ ಬದಲು ತಮ್ಮಿಂದಾದಷ್ಟು ಹುಲ್ಲನ್ನು ಗೋಶಾಲೆಗೆ ನೀಡುವ ಮೂಲಕ ಗೋವುಗಳ ಹಸಿವನ್ನು ನೀಗಿಸಬೇಕೆಂದು ಕೋರಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ವಾಹನದಟ್ಟಣೆ ಮಿತಿ ಮೀರುತ್ತಿದೆ. ಪ್ರತಿಯೊಂದು ರಸ್ತೆಗಳಲ್ಲಿ ಹಸು, ಕರುಗಳು, ಎಮ್ಮೆ, ಕೋಣಗಳು ಗುಂಪು ಗುಂಪಾಗಿ ಸಂಚರಿಸುತ್ತಿವೆ. ಕೆಲವು ಹಸುಗಳು ಕಿಡಿಗೇಡಿಗಳ ದಾಳಿಯಿಂದ ಮತ್ತು ಕೆಲವು ಅನಾರೋಗ್ಯದಿಂದ ಬಳಲುತ್ತಿದ್ದು, ಇವುಗಳನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಾರ್ವಜನಿಕರು ಗೋಶಾಲೆಗೆ ಬಿಟ್ಟಿದ್ದಾರೆ.
ಇನ್ನು ಮುಂದೆಯೂ ಅನಾಥ ಗೋವುಗಳಿಗೆ ಆಶ್ರಯ ನೀಡಲು ಗೋಶಾಲೆ ಸಿದ್ಧವಿದ್ದು, ಆಸಕ್ತರು ಗೋವುಗಳನ್ನು ತಂದು ಬಿಡಬಹುದೆಂದು ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ. ಅನಾಥ ಗೋವುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಕನಿಷ್ಠ ಆಹಾರದ ರೂಪದಲ್ಲಿ ಒಣಹುಲ್ಲನ್ನು ನೀಡುವ ಮೂಲಕ ಮಹತ್ಕಾರ್ಯದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ದೇಣಿಗೆ ಮತ್ತು ಆಹಾರವನ್ನು ನೀಡುವವರು ಗೋಶಾಲೆಯ ಗುರುತಿನ ಚೀಟಿ ಹೊಂದಿರುವ ಪ್ರತಿನಿಧಿಗಳೊಂದಿಗೆ ವ್ಯವಹರಿಸಬೇಕು ಅಥವಾ ಆಯಾ ಊರಿನ ಮುಖ್ಯಸ್ಥರೊಂದಿಗೆ ನಮ್ಮ ಪ್ರತಿನಿಧಿಗಳು ಬರುವಾಗ ನೀಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಹುಲ್ಲು ನೀಡುವವರು ಮೊ.ಸಂ : 94801 80456 ಗೆ ಕರೆ ಮಾಡಬಹುದು. ಧನ ಸಹಾಯ ಮಾಡುವವರು 91648 57163 ಗೆ ಗೂಗಲ್ ಪೇ ಅಥವಾ ಫೋನ್ ಪೇ ಮಾಡಬಹುದಾಗಿದೆ ಎಂದು ಹರೀಶ್ ಜಿ.ಆಚಾರ್ಯ ಹೇಳಿದ್ದಾರೆ.