ವಿಳಂಬವಿಲ್ಲದೆ ಜಾಗ ನೀಡಿ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

January 7, 2021

ಮಡಿಕೇರಿ ಜ. 7 : ವಿವಿಧ ಉದ್ದೇಶಗಳಿಗೆ ಬೇಕಿರುವ ಜಾಗ ಸಂಬಂಧಿಸಿದಂತೆ ಬಾಕಿ ಇರುವ ಪ್ರಸ್ತಾವನೆಗೆ ಶೀಘ್ರ ಜಾಗ ಕಾಯ್ದಿರಿಸಿ ಒದಗಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕಂದಾಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಕಸ ವಿಲೇವಾರಿ, ಸ್ಮಶಾನ, ವಸತಿ, ಅಂಗನವಾಡಿ, ಹೀಗೆ ಹಲವು ಉದ್ದೇಶಕ್ಕೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸಂಬಂಧಿಸಿದಂತೆ ತ್ವರಿತವಾಗಿ ಜಾಗ ಗುರುತಿಸಿ ಒದಗಿಸುವಂತೆ ನಿರ್ದೇಶನ ನೀಡಿದರು.
ಹಾಡಿಯ ಜನರಿಗೆ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ವಿದ್ಯುತ್ ಸಂಪರ್ಕ, ವಾಸದ ಮನೆ, ಹೀಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಈಗಾಗಲೇ ಅರಣ್ಯ ಹಕ್ಕು ಪತ್ರ ನೀಡಲಾಗಿರುವುದಕ್ಕೆ ಆರ್‍ಟಿಸಿ ನೀಡಲಾಗಿದ್ದು, ಕೆಲವು ಬಾಕಿ ಇದ್ದು, ಆರ್‍ಟಿಸಿ ಒದಗಿಸಬೇಕು ಎಂದರು.
ಈ ಬಗ್ಗೆ ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್ ಅವರು ಅರಣ್ಯ ಹಕ್ಕು ಪತ್ರ ನೀಡಿರುವುದಕ್ಕೆ ಕೆಲವು ಕಡೆಗಳಲ್ಲಿ ಆರ್‍ಟಿಸಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಅವರು ಸಕಾಲ ಯೋಜನೆ ಪ್ರಗತಿ ಸಾಧಿಸುವಂತೆ ಸೂಚಿಸಿದರು. ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಅವರು ವಿವಿಧ ಉದ್ದೇಶಗಳಿಗೆ ಜಾಗ ಗುರುತು ಸಂಬಂಧ ಇನ್ನಷ್ಟು ತ್ವರಿತ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ಪೊನ್ನಂಪೇಟೆ ಮತ್ತು ಕುಶಾಲನಗರ ಹೊಸ ತಾಲ್ಲೂಕು ರಚನೆಯಾಗಿದ್ದು, ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಒದಗಿಸಬೇಕಾಗಿ ಕೋರಿದರು.
ಡಿಡಿಎಲ್‍ಆರ್ ಶ್ರೀನಿವಾಸ್, ಐಟಿಡಿಪಿ ಅಧಿಕಾರಿ ಶಿವಕುಮಾರ್, ಕೃಷಿ ಇಲಾಖೆ ಉಪ ನಿರ್ದೇಶಕರಾದ ರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಿಂಗರಾಜು, ನಗರಾಭಿವೃದ್ಧಿ ಯೋಜನಾ ಕೋಶದ ರಾಜು, ಜಿಲ್ಲಾ ನೋಂದಾಣಾಧಿಕಾರಿ ಸಿದ್ದೇಶ್, ತಾ.ಪಂ.ಇಒ ಲಕ್ಷ್ಮೀ, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ತಹಶೀಲ್ದಾರ್ ಗೋವಿಂದ ರಾಜು, ಮಹೇಶ್, ಯೋಗಾನಂದ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ, ಪ.ಪಂ.ಮುಖ್ಯಾಧಿಕಾರಿಗಳು, ಶಿರಸ್ತೆದಾರರು ಇತರರು ಇದ್ದರು.

error: Content is protected !!