ಕೃಷಿ ಕಾಯ್ದೆ ವಿರುದ್ಧ ಮಡಿಕೇರಿಯಲ್ಲಿ ಸಿಐಟಿಯು ಪ್ರತಿಭಟನೆ

January 8, 2021

ಮಡಿಕೇರಿ ಜ.8 : ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ದೇಶ ವ್ಯಾಪಿ ರೈತರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆಯ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆಯ ಪ್ರಮುಖರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಕೃಷಿ ಕಾಯಿದೆಯನ್ನು ಜಾರಿಗೆ ತಂದಿದೆ. ಅಲ್ಲದೆ ವಿದ್ಯುತ್ ಮಸೂದೆ ಜನವಿರೋಧಿಯಾಗಿದೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಮಹದೇವು ಮಾತನಾಡಿ, ಬಂಡವಾಳಶಾಹಿಗಳÀ ಪರವಾಗಿರುವ ಕಾರ್ಮಿಕ ನೀತಿಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳನ್ನು ಮುಂದುವರೆಸಿದ್ದು, ಕೃಷಿ ಕ್ಷೇತ್ರಕ್ಕೆ ಕಂಟಕವಾಗಿರುವ ಕಾಯ್ದೆಗಳನ್ನು ಹಿಂಪಡೆಯುವ ಆಸಕ್ತಿ ಸರ್ಕಾರಕ್ಕಿಲ್ಲ. ಇದುವರೆಗೆ ಏಳು ಬಾರಿ ರೈತ ಸಂಘಟನೆಗಳ ಜೊತೆ ಮಾತುಕತೆ ನಡೆಸಿರುವ ಸರ್ಕಾರ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಲು ಕೂಡ ಹಿಂಜರಿದಿದೆ ಎಂದು ಟೀಕಿಸಿದರು. ರೈತಾಪಿ ವರ್ಗದ ಹೋರಾಟ ತೀವ್ರಗೊಳ್ಳಲಿದ್ದು, ಸಿಐಟಿಯು ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದು ಮಹದೇವು ತಿಳಿಸಿದರು.
ಪ್ರಮುಖರಾದ ಪಿ.ಆರ್.ಭರತ್, ಎ.ಸಿ.ಸಾಬು, ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
::: ಬೇಡಿಕೆಗಳು :::
ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು, ವಿದ್ಯುತ್ ಮಸೂದೆ 2020ನ್ನು ಕೈಬಿಡಬೇಕು, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು. ಆದಾಯ ತೆರಿಗೆ ಮಿತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೂ ಮಾಸಿಕ 7,500 ರೂ. ನಗದು ವರ್ಗಾವಣೆ ಮಾಡಬೇಕು. ಪ್ರತಿ ತಿಂಗಳು 10 ಕೆ.ಜಿ ಆಹಾರ ಧಾನ್ಯ ಉಚಿತವಾಗಿ ವಿತರಿಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 200 ದಿನಗಳ ಕೆಲಸ ನೀಡಿ ಕನಿಷ್ಠ ವೇತನ ರೂ.700 ನಿಗಧಿ ಮಾಡಬೇಕು, ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು, ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಮಾದರಿಯನ್ನು ಜಾರಿಗೆ ತರಬೇಕು, ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ರಕ್ಷಣಾ ಯೋಜನೆಗಳನ್ನು ವಿಸ್ತರಿಸಬೇಕು, ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

error: Content is protected !!