ಕೊಡಗಿನ ಆರು ಕೇಂದ್ರಗಳಲ್ಲಿ ಕೋವಿಡ್ ಲಸಿಕೆ (ಡ್ರೈರನ್) ಪೂರ್ವಾಭ್ಯಾಸ

January 8, 2021

ಮಡಿಕೇರಿ ಜ. 8 : ಕೋವಿಡ್ ಲಸಿಕೆ (ಡ್ರೈರನ್) ಅಣಕು ಪ್ರದರ್ಶನಕ್ಕೆ ಇಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಕೋವಿಡ್ ಲಸಿಕೆಯ ಪೂರ್ವಾಭ್ಯಾಸವು (ಡ್ರೈರನ್) ಇಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಕೋವಿಡ್ ವಾರಿಯರ್ಸ್, ಆರೋಗ್ಯ ಸಿಬ್ಬಂದಿಗೆ ಅಣಕು ಲಸಿಕೆಯನ್ನು ನೀಡಲಾಯಿತು.
ಜಿಲ್ಲಾಧಿಕಾರಿಯವರು ಲಸಿಕೆ ನೀಡಲು ಸ್ಥಾಪಿಸಲಾಗಿರುವ ಪ್ರವೇಶ ಮತ್ತು ನೋಂದಣಿ ಕೊಠಡಿಗಳನ್ನು ಪರಿಶೀಲಿಸಿದರು. ಕೋವಿಡ್ ಸಾಪ್ಟ್‍ವೇರ್‍ನಲ್ಲಿ ನೋಂದಣಿ ಮಾಡುವ ಕ್ರಮ, ಲಸಿಕೆ ಸಂಗ್ರಹ, ಸಾಗಾಣೆ, ಡಿ-ಫ್ರೀಜ್ ಕಾರ್ಯಕ್ಕೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಹಾಗೂ ತಾಲೀಮು ಕಾರ್ಯ ಪರಿವೀಕ್ಷಣೆ ಮಾಡಿದರು.
ಜಿಲ್ಲಾ ಆಸ್ಪತ್ರೆ, ಸೋಮವಾರಪೇಟೆಯ ತಾಲ್ಲೂಕು ಆಸ್ಪತ್ರೆ, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ, ಕಾಕೋಟುಪರಂಬು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ವಿರಾಜಪೇಟೆಯ ದಂತ ವಿಶ್ವವಿದ್ಯಾನಿಲಯ ಹಾಗೂ ಮಡಿಕೇರಿ ನಗರ ಆರೋಗ್ಯ ಕೇಂದ್ರ, ಸೇರಿದಂತೆ ಜಿಲ್ಲೆಯ 06 ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯ ಪೂರ್ವಾಭ್ಯಾಸವು (ಡ್ರೈರನ್) ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೊದಲನೇ ಹಂತದಲ್ಲಿ ಜಿಲ್ಲೆಯಲ್ಲಿ 6344 ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದ್ದು, ಇವರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಕೊಡಗು ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಾ.ಗೋಪಿನಾಥ, ಡಾ.ಮಹೇಶ್ ಇತರರು ಇದ್ದರು.

error: Content is protected !!