ಕತ್ತಲೆಕಾಡು ಚಾಂಪಿಯನ್ಸ್ ಲೀಗ್‍ಗೆ ಚಾಲನೆ

January 8, 2021

ಮಡಿಕೇರಿ : ಗ್ರಾಮೀಣ ಭಾಗದ ಯುವಕರು ಒಗ್ಗಟ್ಟಿನಿಂದ ಕ್ರೀಡಾಕೂಟ ಆಯೋಜನೆ ಮಾಡುವುದು ಉತ್ತಮ ಬೆಳವಣಿಗೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.
ಕಡಗದಾಳು ಗ್ರಾಮದ ಮಾದೇಟಿರ ರಾಜಾ ಅವರ ತಲಾಟ್ ಮೈದಾನದಲ್ಲಿ ‘ಕತ್ತಲೆಕಾಡು ಚಾಂಪಿಯನ್ಸ್ ಲೀಗ್‍’ಗೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮ ಆಯೋಜನೆ ಸಂದರ್ಭ ಸಮಯ ಪಾಲನೆ, ಊರಿನವರ ತೊಡಗಿಸಿಕೊಳ್ಳುವಿಕೆಯಲ್ಲಿ ಕೊರತೆ ಕಂಡುಬರುತ್ತದೆ. ಆದರೆ ಕತ್ತಲೆಕಾಡು ಭಾಗದ ಯುವಕರು, ಗ್ರಾಮಸ್ಥರು ಅತ್ಯುತ್ಸಾಹದಿಂದ ಪಾಲ್ಗೊಂಡಿರುವುದು ಕ್ರೀಡಾಕೂಟದ ಮೇಲಿನ ಅಭಿಮಾನಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳೆಗಾರ ಮಾದೇಟಿರ ರಾಜ ಮಾತನಾಡಿ, ಮೂರು ದಿನದ ಕ್ರೀಡಾಕೂಟ ಯಶಸ್ವಿಯಾಗಬೇಕಾದರೆ ಎಲ್ಲಾ ಕ್ರೀಡಾಪಟುಗಳ ಸಹಕಾರ ಮುಖ್ಯ. ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡದೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವಂತೆ ಕರೆ ನೀಡಿದರು.
ಗುತ್ತಿಗೆದಾರ ಬಿ.ಡಿ. ನಾರಾಯಣ ರೈ ಚಾಂಪಿಯನ್ಸ್ ಟ್ರೋಫಿ ಅನಾವರಣ ಮಾಡಿದರು. ಉಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕ್ಲೋಸ್‍ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಜಾತ, ಗುತ್ತಿಗೆದಾರ ರಮೇಶ್ ರೈ ಪಂದ್ಯಾವಳಿಗೆ ಶುಭ ಕೋರಿದರು.
ಸನ್ಮಾನ : ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿರುವ ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಪಂದ್ಯಾವಳಿ ನಡೆಸಲು ಸ್ಥಳಾವಕಾಶ ನೀಡಿದ ಬೆಳೆಗಾರ ಮಾದೇಟಿರ ರಾಜ ಅವರನ್ನು ಕೆಸಿಎಲ್ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೆಸಿಎಲ್ ಸಮಿತಿ ಅಧ್ಯಕ್ಷ ಬಿ.ಎನ್. ರಾಜೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ವಿವೇಕ್ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಸಿ.ಕೆ. ನಾಸರ್, ಯೂಸುಫ್, ಪರಿಚನ ಶರತ್, ಬಿ.ವಿ. ಯೋಗೇಶ್, ನಂದ ಕುಮಾರ್, ಮುಸ್ತಫಾ, ಗೋಪಿ ಹಾಗೂ ಇತರರಿದ್ದರು. ಅಕ್ಷಯ್ ರೈ ಪ್ರಾರ್ಥಿಸಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರ್ವಹಣೆ ಮಾಡಿದರು.

9 ತಂಡಗಳು : ಕಡಗದಾಳು ಪಂಚಾಯಿತಿ, ಹುಲಿತಾಳ, ಇಬ್ನಿವಳವಾಡಿ ಗ್ರಾಮ ವ್ಯಾಪ್ತಿಯ ಆಟಗಾರರನ್ನೊಳಗೊಂಡ 9 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ಕಡಗದಾಳು ಸೂಪರ್ ಕಿಂಗ್ಸ್, ಟೀಂ ಜಾಗ್ವರ್ಸ್, ಟೀಂ ಲೂಸರ್ಸ್, ನೀರುಕೊಲ್ಲಿ ಅಫಿಷಿಯಲ್ ಕ್ರಿಕೆಟರ್ಸ್, ರೈಸಿಂಗ್ ಸ್ಟಾರ್ಸ್ ಸ್ಯಾಂಡಲ್‍ಕಾಡ್, ಎಸ್‍ಎಂಎಸ್ ಬ್ರದರ್ಸ್, ಟೀಂ ಮ್ಯಾಕ್ಸಿಮಂ, ಸೋಲ್ಜರ್ ಕ್ರಿಕೆಟರ್ಸ್, ಜೆ.ಸಿ. ಸ್ಟ್ರೈಕರ್ಸ್ ಡಾರ್ಕ್ ಫಾರೆಸ್ಟ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ವಿಜೇತ ತಂಡಕ್ಕೆ 44,444 ರೂ. ನಗದು, ದ್ವಿತೀಯ 22,222 ರೂ., ತೃತೀಯ 11,111 ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದೆಂದು ಸಮಿತಿ ತಿಳಿಸಿದೆ. ಜನವರಿ 10ರಂದು ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

error: Content is protected !!