ಮಡಿಕೇರಿಯಲ್ಲಿ ಶ್ರೀ ರಾಜೇಶ್ವರಿ, ಗಣಪತಿ ಹಾಗೂ ನಾಗ ದೈವದ ಮೂರ್ತಿಗಳ ಮೆರವಣಿಗೆ

January 9, 2021

ಮಡಿಕೇರಿ ಜ. 9 : ಮಂಗಳದೇವಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಡಲಿರುವ ರಾಜೇಶ್ವರಿ ಗಣಪತಿ ಹಾಗೂ ನಾಗ ದೈವದ ಮೂರ್ತಿಗಳ ಮೆರವಣಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ನಗರದ ಬನ್ನಿ ಮಂಟಪದ ಬಳಿಯಿಂದ ಅಲಂಕೃತ ಮಂಟಪದಲ್ಲಿ ಮೂರ್ತಿಗಳನ್ನು ಚಂಡೆ ವಾದ್ಯ ಹಾಗೂ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ರಾಜೇಶ್ವರಿ ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು.
ಮೆರವಣಿಗೂ ಮುನ್ನ ಪ್ರತಿಷ್ಠಾಪಿತ ಮೂರ್ತಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಈಡುಗಾಯಿ ಒಡೆದರು.
ಮೈಸೂರಿನ ಶಿಲ್ಪಿ ಸೂರ್ಯ ಪ್ರಕಾಶ್ ಅವರು ಕೆತ್ತಿರುವ ಇಪ್ಪತ್ತೆರಡು ಇಂಚು ಎತ್ತರದ ರಾಜೇಶ್ವರಿ ದೇವಿ, ಹದಿನೆಂಟು ಇಂಚು ಎತ್ತರದ ಗಣಪತಿ ಹಾಗೂ ಕೈಕಂಬದ ಲಕ್ಷ್ಮಣ ಅವರು ಕೆತ್ತಿರುವ ನಾಗದೇವರ ಹದಿನೇಳು ಇಂಚಿನ ಮೂರ್ತಿಗಳನ್ನು ರಾಜೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಜ. 12 ರಿಂದ 18ರ ವರೆಗೆ ಹಲವಾರು ಧಾರ್ಮಿಕ ಕೈಂಕರ್ಯಗಳೊಂದಿಗೆ ಪೂಜಾ ವಿಧಿ ವಿಧಾನಗಳು ಜರುಗಲಿದೆ.
ಮೆರವಣಿಗೂ ಮುನ್ನ ದೇವಾಲಯ ಆಡಳಿತ ಮಂಡಳಿ ವತಿಯಿಂದ ತಾಳತ್‍ಮನೆಯ ದುರ್ಗಾಭಗವತಿ ದೇವಾಲಯ, ಮಡಿಕೇರಿಯ ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ ಸೇರಿದಂತೆ ಕರವಲೆ ಭಗವತಿ, ಪೇಟೆ ಶ್ರೀರಾಮ ಮಂದಿರ, ಮುನೇಶ್ವರ, ದೇಚೂರು ಶ್ರೀ ರಾಮ ಮಂದಿರ, ಆದಿಪರಾಶಕ್ತಿ ದೇವಲಯದಲ್ಲಿ ಪೂಜೆ ಸಲ್ಲಿಸಲಾಯಿತು.

error: Content is protected !!