ಸೋಮವಾರ ಮಡಿಕೇರಿಗೆ ಬರಲಿದ್ದಾರೆ ಈ ಮೂವರು ಸಚಿವರು

09/01/2021

ಮಡಿಕೇರಿ ಜ.9 : ಜಿ.ಪಂ ಮತ್ತು ತಾ.ಪಂ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಜ.11 ರಂದು ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ಜನಸೇವಕ ಸಮಾವೇಶದಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ವಕ್ತಾರ ಅರವಿಂದ ಲಿಂಬಾವಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾ ವಕ್ತಾರ ಮಹೇಶ್ ಜೈನಿ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 10.30 ಗಂಟೆಗೆ ನಗರದ ಕ್ರಿಸ್ಟಲ್ ಹಾಲ್ ನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿಯ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.