ಕೂಡಿಗೆ ಗ್ರಾ.ಪಂ ವಿರುದ್ಧ ಅವ್ಯವಹಾರದ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ

ಮಡಿಕೇರಿ ಜ.9 : ಕೂಡಿಗೆ ಗ್ರಾ.ಪಂ ಯಲ್ಲಿ 2015 ರಲ್ಲಿ ಅಧಿಕಾರಕ್ಕೆ ಬಂದ ಆಡಳಿತ ಮಂಡಳಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದೆ ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಕಾಂತರಾಜು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂತರಾಜು ಅಂದಿನ ಆಡಳಿತ ಮಂಡಳಿ ಜನಪರವಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸದೆ, ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದೆ. 2016ನೇ ಸಾಲಿನಲ್ಲಿ ಕೂಡಿಗೆ ಗ್ರಾ.ಪಂ ಸಭಾಂಗಣದ ಹಿಂದಿನ ಕಟ್ಟಡದ ದುರಸ್ತಿ ಕಾಮಗಾರಿಯಲ್ಲಿ ಒಂದೇ ಕೆಲಸಕ್ಕೆ ಎರಡು ಹೆಸರಿನಲ್ಲಿ ಹಣ ಪಾವತಿ ಮಾಡಲಾಗಿದೆ. ಪಂಚಾಯಿತಿಯ ಮುಂಭಾಗದಲ್ಲಿ ಅಳವಡಿಸಿರುವ ಇಂಟರ್ಲಾಕ್ಗೆ ಆರು ಪಟ್ಟು ಬಿಲ್ ಮಾಡಲಾಗಿದೆ ಎಂದು ಆರೋಪಿಸಿದರು.
ಪಂಚಾಯಿತಿ ವತಿಯಿಂದ ವಿದ್ಯುತ್ ದೀಪಗಳ ಸೌಲಭ್ಯವನ್ನು ಒದಗಿಸದೆ ಇರುವುದರಿಂದ ಸ್ಥಳೀಯರು ತಾವಾಗಿಯೇ ಮನೆಯ ಎದುರು ವಿದ್ಯುತ್ ದೀಪಗಳನ್ನು ಅಳವಡಿಸಿಕೊಂಡಿದ್ದಾರೆ. ಮಾಸಿಕ ಸಭೆಯಲ್ಲಿ ಈ ಬಗ್ಗೆ ನಡಾವಳಿಯನ್ನು ಮಾಡಿ ವಿದ್ಯುತ್ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ. ಆದರೆ ಅದೇ ವರ್ಷ ಸುಮಾರು ಆರು ಲಕ್ಷ ರೂ. ಗಳಲ್ಲಿ ವಿದ್ಯುತ್ ಸಾಮಾಗ್ರಿಗಳನ್ನು ಖರೀದಿ ಮಾಡಿರುವ ಬಗ್ಗೆ ಪಂಚಾಯಿತಿ ಮಾಹಿತಿ ನೀಡಿದೆ.
ಈ ರೀತಿಯ ಅನೇಕ ಅವ್ಯವಹಾರಗಳು ನಡೆದಿರುವ ಬಗ್ಗೆ ಸಂಶಯವಿದ್ದು, ಜಮಾಮಂದಿ ಕಾರ್ಯಕ್ರಮದಲ್ಲಿ ತನಿಖೆಗಾಗಿ ಒತ್ತಾಯಿಸಲಾಗಿದೆ ಎಂದು ಕಾಂತರಾಜು ತಿಳಿಸಿದರು.
ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ದುರುಪಯೋಗವಾದ ಹಣವನ್ನು ಸಂಬಂಧಿಸಿದ ವ್ಯಕ್ತಿಗಳಿಂದಲೇ ಪಂಚಾಯಿತಿಗೆ ತುಂಬಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಹೆಚ್.ಜೆ.ಶಿವಣ್ಣ, ಗ್ರಾಮಸ್ಥ ಕೆ.ಎಂ.ಮಂಜುನಾಥ್ ಹಾಗೂ ಭುವನಗಿರಿ ಗ್ರಾಮಸ್ಥ ದಾಮೋದರ್(ಧನು) ಉಪಸ್ಥಿತರಿದ್ದರು.
